ಮೈಸೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರ ಪರಿಹಾರ ನೀಡುವುದರ ಜೊತೆಗೆ ರಾಜ್ಯ ಸರ್ಕಾರವೂ ಪ್ರವಾಹಪೀಡಿತ ಜಿಲ್ಲೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಭಾನುವಾರ ನಗರದ ರೈಲು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ, ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದಿಂದ ಸಂಕಷ್ಟಕ್ಕೀಡಾಗಿವೆ. ಪ್ರಧಾನಿ ನರೇಂದ್ರ ಮೋದಿ ಕೂಡಲೇ ರಾಜ್ಯಕ್ಕೆ ಭೇಟಿ ನೀಡಬೇಕು. ಸೆ.7ರಂದು ರಾಜ್ಯ ಭೇಟಿ ವೇಳೆ ಮೊದಲ ಕಂತಿನಲ್ಲಿ 50 ಸಾವಿರ ಕೋಟಿ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳದಿದ್ದರೆ ಕನ್ನಡ ಒಕ್ಕೂಟಗಳ ಪರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು. ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಪ್ರವಾಹ ಪರಿಹಾರ ಸರಿಯಾಗಿ ದೊರೆಯುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸೂಕ್ತವಾಗಿ ಪರಿಹಾರ ನೀಡಬೇಕು. ಎಲ್ಲಾ ರಾಜಕೀಯ ಪಕ್ಷಗಳೂ ಇಂತಹ ಸಂದರ್ಭದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು.
ತೊಂದರೆಗೆ ಒಳಗಾಗಿರುವ ಬಾಡಿಗೆ ಮನೆಯವರಿಗೂ ಪರಿಹಾರ ನೀಡಬೇಕು. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿದ್ದರೂ ಮೊದಲಿನಷ್ಟು ಧೈರ್ಯ ಇಲ್ಲ. ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ. ಮೂರು ಜನ ಉಪ ಮುಖ್ಯಮಂತ್ರಿಗಳು ಬೇಕಾಗಿರಲಿಲ್ಲ. ಸಂವಿಧಾನದಲ್ಲಿ ಈ ಹುದ್ದೆಯೇ ಇಲ್ಲ. ಅಲ್ಲದೆ ಯಡಿಯೂರಪ್ಪ ವಿರುದ್ಧ ದ್ವೇಷದಿಂದ ಈ ಕಾರ್ಯ ಮಾಡಲಾಗಿದೆ. ಯಡಿಯೂರಪ್ಪ ಕೇವಲ ನಾಮ್‌ಕೆವಾಸ್ಥೆ ಮುಖ್ಯಮಂತ್ರಿ ಎಂದು ಲೇವಡಿ ಮಾಡಿದರು.
ಭೈರಪ್ಪ ಅವರು ಪ್ರತಿ ಬಾರಿ ಕರ್ನಾಟಕದಿಂದ ನೀರು ಕೇಳುವ ತಮಿಳುನಾಡಿನಿಂದ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಆರ್ಥಿಕ ನೆರವು ಕೇಳಬೇಕು ಎಂಬ ಭೈರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಭೈರಪ್ಪನವರ ವಾದಕ್ಕೆ ಅರ್ಥವೇ ಇಲ್ಲ. ಅವರ ಬಗ್ಗೆ ವಾದ ಮಾಡುವುದೇಕೆ. ನೀರು ಹೆಚ್ಚು ಬಂದಿದೆ ಎಂದು ತಮಿಳುನಾಡಿನ ಬಳಿಯಲ್ಲಿ ಹಣ ಕೇಳುವುದು ಸರಿಯಲ್ಲ. ನಮಗೆ ತೊಂದರೆ ಆದಾಗ ನಾವು ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ.
ಏನೇ ಆದರೂ ಮೇಕೆ ದಾಟು ಯೋಜನೆ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು. ಟಿಪ್ಪು ಸುಲ್ತಾನ್ ಈ ದೇಶ ಕಂಡ ಮಹಾನ್ ಹೋರಾಟಗಾರ. ದೇಶಕ್ಕಾಗಿ ತನ್ನ 2 ಮಕ್ಕಳನ್ನು ಒತ್ತೆ ಇಟ್ಟಂತಹ ದೇಶಪ್ರೇಮಿ. ಕನ್ನಂಬಾಡಿಗೆ ಮೊದಲು ಶಂಕು ಸ್ಥಾಪನೆ ಮಾಡಿದ್ದು ಟಿಪ್ಪು. ಹೀಗಾಗಿ ಅವರ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು ಎಂದು ಆಗ್ರಹಿಸಿದರು.