Advertisement

ಸಮರ್ಪಕ ದಾಖಲೆ ಮಾಹಿತಿ ನೀಡಿ

12:29 PM Mar 17, 2022 | Team Udayavani |

ಬಳ್ಳಾರಿ: ಜಿಲ್ಲೆಯಲ್ಲಿನ ಎಲ್ಲ ತಾಲೂಕುವಾರು ಆಸ್ಪತ್ರೆಗಳಲ್ಲಿನ ಜನನ ಮತ್ತು ಮರಣ ದಾಖಲೆಗಳ ನೋಂದಣಿಗಳು, ಬೆಳೆಕಟಾವು ಪ್ರಯೋಗಗಳು, ಬೆಳೆ ಕ್ಷೇತ್ರಗಳ ಮರು ಹೊಂದಾಣಿಕೆ ಕುರಿತು ಸಮರ್ಪಕವಾದ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ಸೂಚನೆ ನೀಡಿದ್ದಾರೆ. ನಗರದ ಡಿಸಿ ಕಚೇರಿ ಕೆಸ್ವಾನ್‌ ವೀಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಜನನ ಮತ್ತು ಮರಣ ನೋಂದಣಿಯನ್ನು ಇ-ಜನ್ಮ ತಂತ್ರಾಂಶದಲ್ಲಿ 2015ರಿಂದ ನೋಂದಣಿ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿ ಮೊದಲ ಬಾರಿಗೆ 2019ರಿಂದ ಇ-ಜನ್ಮ ತಂತ್ರಾಂಶದಲ್ಲಿ ಡಿಜಿಟಲ್‌ ಸಹಿ ಮುಖಾಂತರ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಕೈಬರಹ ಪ್ರಮಾಣಪತ್ರಗಳು ನೀಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. 2019ರಿಂದ 2022ರವರೆಗಿನ ಜನನ ಮತ್ತು ಮರಣ ನೋಂದಣಿಗಳ ಇ-ತಂತ್ರಾಂಶದಲ್ಲಿ ನೋಂದಣಿ ಸಂಬಂಧಿಸಿದಂತೆ ವಾರದೊಳಗೆ ಮಾಹಿತಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸಾಧಾರಣ ಮರಣ ಮತ್ತು ಕೋವಿಡ್‌ನಿಂದ ಮೃತಪಟ್ಟವರ ವರದಿ ಸಲ್ಲಿಸುವಂತೆಯೂ ಸೂಚಿಸಿದರು.

ಮುಂಗಾರು ಮತ್ತು ಹಿಂಗಾರು ಬೆಳೆಗಳ ಕಟಾವು ಸಂಬಂಧಿಸಿದಂತೆ ಕೈಗೊಂಡಿರುವ ಪ್ರಯೋಗಗಳು ಮತ್ತು ಅದರ ವರದಿಗಳು ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಸಂಬಂಧಪಟ್ಟಂತೆ ಇತರೆ ಅಂಕಿ-ಅಂಶಗಳ ಕುರಿತು ಡಿಸಿ ಮಾಲಪಾಟಿ ಅವರು ಚರ್ಚಿಸಿ ಕೆಲ ಸಲಹೆ-ಸೂಚನೆಗಳನ್ನು ನೀಡಿದರು.

2021ನೇ ಸಾಲಿನಲ್ಲಿ ಜಿಲ್ಲೆಯ ಜನನ ದರ ಶೇ. 19.76 ಮತ್ತು ಮರಣ ಪ್ರಮಾಣ ದರ ಶೇ. 7.92 ಇದೆ. ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಲ್ಲಿ 3264 ಜನನ, ಮನೆಗಳಲ್ಲಿ 109 ಮತ್ತು ವಿಳಂಬ ನೋಂದಣಿ 3090 ಸೇರಿದಂತೆ ಒಟ್ಟು 6463 ಜನನವಾಗಿವೆ. ಅದೇ ರೀತಿ ನಗರ ಪ್ರದೇಶದಲ್ಲಿ 12299 ಆಸ್ಪತ್ರೆಗಳಲ್ಲಿ ಮತ್ತು 36 ಮನೆಗಳಲ್ಲಿ,ವಿಳಂಬ ನೋಂದಣಿ 11717 ಸೇರಿದಂತೆ 24052 ಜನನವಾಗಿವೆ. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಕೋವಿಡ್‌ ಕಾರಣದಿಂದ 3360 ಮರಣ ನೋಂದಣಿ ದಾಖಲಾಗಿವೆ. ಈ ಸಭೆಯಲ್ಲಿ ಸಹಾಯಕ ಆಯುಕ್ತರಾದ ಡಾ| ಆಕಾಶ್‌ ಶಂಕರ್‌, ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next