ಭಾಲ್ಕಿ: ತಾಲೂಕಿನ ರೈತರ ಪಂಪ್‌ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಜತೆಗೆ ನಡೆದ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ವಿಪರೀತವಾಗಿದೆ. ರೈತರ ಬಾವಿ, ಬೋರ್‌ವೆಲ್‌ಗಳಲ್ಲಿ ನೀರು ಇದ್ದರೂ ವಿದ್ಯುತ್ ತೊಂದರೆಯಿಂದ ಬೆಳೆಗಳಿಗೆ ನೀರು ಬಿಡಲಾಗದೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇರುವ ಎರಡ್ಮೂರು ಗಂಟೆ ತ್ರಿಫೇಸ್ ವಿದ್ಯುತ್ ಕೂಡ ಕೈಕೊಡುತ್ತಿದೆ. ಒಂದು ಬಾರಿ ಮಳೆ, ಗಾಳಿ ಬಿಸಿದರೇ ಸಾಕು ದಿನವೀಡಿ ಪೂರ್ತಿ ವಿದ್ಯುತ್ ಇರುವುದಿಲ್ಲ. ಹಳೆಯ ಕಾಲದ ತಂತಿಗಳು ಜೋತು ಬೀಳುತ್ತಿವೆ. ಗಾಳಿಗೆ ವಿದ್ಯುತ್ ತಂತಿ ಕಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಇನ್ನೂ ವಿದ್ಯುತ್ ಪರಿವರ್ತಕ ಕೆಟ್ಟರಂತೂ ರಿಪ್ಲೇಸ್ ಆಗಲು ತಿಂಗಳು ಬೇಕಾಗುತ್ತಿದೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಕೂಡಲೇ ವಿದ್ಯುತ್ ಇಲಾಖೆಯಲ್ಲಿ ಸುಧಾರಣೆ ಆಗಬೇಕು. ರೈತರ ಪಂಪ್‌ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗಬೇಕು. ಹಾಳಾದ ವಿದ್ಯುತ್ ಪರಿವರ್ತಕ 24 ಗಂಟೆಯೊಳಗೆ ರಿಪ್ಲೇಸ್ ಆಗಬೇಕು. ಹಳಿಯ ತಂತಿಗಳನ್ನು ಹಂತ-ಹಂತವಾಗಿ ಬದಲಾಯಿಸಿ ವಿದ್ಯುತ್ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೆಸ್ಕಾಂ ಎಂ.ಡಿ. ರಾಹುಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಇದ್ದರು.