Advertisement

ಅಧಿಕಾರಿಗಳಿಗೆ ನಿಖರ ವರದಿ ಒಪ್ಪಿಸಿ

02:38 PM Jul 03, 2018 | Team Udayavani |

ಯಾದಗಿರಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ಕೃಷಿ ಕಲ್ಯಾಣ ಅಭಿಯಾನ ಕಾರ್ಯಕ್ರಮದಡಿ ಆಯ್ಕೆ ಮಾಡಲಾಗಿರುವ ಜಿಲ್ಲೆಯ 25 ಗ್ರಾಮಗಳಲ್ಲಿ ವಿವಿಧ ಇಲಾಖೆಗಳಿಂದ ಕೈಗೊಳ್ಳಬೇಕಿರುವ ಯೋಜನೆಗಳನ್ನು ಜುಲೈ ತಿಂಗಳ ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು ಎಂದು ಅಭಿಯಾನದ ಜಿಲ್ಲೆಯ ನೋಡಲ್‌ ಅಧಿಕಾರಿ ಹಾಗೂ ಬಳ್ಳಾರಿಯ ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ| ಎಸ್‌.ಎಲ್‌. ಪಾಟೀಲ ಅಧಿ ಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೃಷಿ ಕಲ್ಯಾಣ ಅಭಿಯಾನ ಕಾರ್ಯಕ್ರಮದಡಿ ಜಿಲ್ಲೆಯ 25 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಅಭಿಯಾನಕ್ಕೆ ಸಂಬಂಧಪಟ್ಟ ಇಲಾಖೆಗಳು ಎಲ್ಲಾ ಕಾರ್ಯಕ್ರಮಗಳ ಫಲಾನುಭವಿಗಳ ಪಟ್ಟಿಯನ್ನು ಆಧಾರ್‌ ಸಂಖ್ಯೆ ಒಳಗೊಂಡಂತೆ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಿಗೆ ನೀಡಬೇಕು. ಅವರು ಈ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಮಾತನಾಡಿ, ನಿಗದಿತ ಅವಧಿಯಲ್ಲಿ ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಜಿಲ್ಲೆಗೆ ಕೇಂದ್ರ ಸರಕಾರದ ನೋಡಲ್‌ ಅಧಿಕಾರಿಗಳು ಬಂದಾಗ ಪ್ರಗತಿ ಬಗ್ಗೆ ನಿಖರ ವರದಿ ಒಪ್ಪಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌. ಮಾತನಾಡಿ, 25 ಗ್ರಾಮಗಳಲ್ಲಿ ನಿಗದಿಪಡಿಸಿದ್ದ 4,476 ಮಣ್ಣು ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಈ ಪೈಕಿ 3,088 ಮಣ್ಣು ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಇಲ್ಲಿವರೆಗೆ 2,773 ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಗಿದೆ. ಪ್ರತಿ ಹಳ್ಳಿಗೆ 200 ರೈತರಂತೆ ಒಟ್ಟು 5,000 ರೈತರಿಗೆ 4 ಕೆ.ಜಿ ತೊಗರಿ ಬೀಜದ ಕಿರು ಚೀಲ ವಿತರಿಸಲಾಗಿದೆ. 

Advertisement

ಹಳ್ಳಿಗೆ 20ರಂತೆ ನಡಾಫ್‌ ಗೊಬ್ಬರದ ಗುಂಡಿಗಳನ್ನು ನಿರ್ಮಿಸಲು ಮತ್ತು ಕೃಷಿ ಯಂತ್ರೋಪಕರಣ ವಿತರಿಸಲು ರೈತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳ ವತಿಯಿಂದ ಪ್ರತಿ ಗ್ರಾಮದಲ್ಲಿ 100 ಜನ ರೈತರಿಗೆ ತಲಾ 5 ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ಇಲಾಖೆಗಳ ಅಧಿಕಾರಿಗಳು ಸಭೆ ಗಮನಕ್ಕೆ ತಂದರು. 

ಈ ಎಲ್ಲಾ ಗ್ರಾಮಗಳಲ್ಲಿ ಪಶುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ವರದಿ ಒಪ್ಪಿಸಿದರು. ಪ್ರತಿ ಗ್ರಾಮದಲ್ಲಿ ಜೇನು ಸಾಕಾಣಿಕೆ, ಅಣಬೆ ಬೇಸಾಯ, ಕೈತೋಟ ಸೇರಿದಂತೆ ಇತರೆ ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದ್ದು, ಈ ಪೈಕಿ 23 ಗ್ರಾಮಗಳಲ್ಲಿ ರೈತರಿಗೆ ತರಬೇತಿ ನೀಡಲಾಗಿದೆ ಎಂದು ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಉಮೇಶ ಬಾರಿಕರ್‌ ಸಭೆಯ ಗಮನಕ್ಕೆ ತಂದರು. ಕೃಷಿ ತಾಂತ್ರಿಕ ಅಧಿಕಾರಿ ರಾಜಕುಮಾರ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next