ಬೀದರ: ಜಿಲ್ಲೆಯ ಕಾರಂಜಾ ಜಲಾಶಯ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಕಲ್ಪಿಸುವ ಮೂಲಕ ನಮಗಾದ ಅನ್ಯಾಯ ಸರಿಪಡಿಸಬೇಕು ಎಂದು ಸಂತ್ರಸ್ತ ರೈತರು ಒತ್ತಾಯಿಸಿದರು.
ನಗರದ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸರ್ಕಾರದ ಮಲತಾಯಿ ಧೋರಣೆಯಿಂದ ತಮಗಾದ ಅನ್ಯಾಯ ತೋಡಿಕೊಂಡರು. ಪರಿಹಾರಕ್ಕೆ ಸಂಬಂಧಿಸಿದಂತೆ ನಾಲ್ಕು ದಶಕವಾದರೂ ಯಾವ ಸರ್ಕಾರಗಳು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ ಮಾತನಾಡಿ, ಕಾರಂಜಾ ಯೋಜನೆಯಡಿ ಜಮೀನು ಕೊಟ್ಟ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಮೂರು ತಲೆಮಾರು ಕಳೆದರೂ ನ್ಯಾಯಸಮ್ಮತ ಪರಿಹಾರ ಮರೀಚಿಕೆ ಆಗಿದೆ. ಈ ಯೋಜನೆಗಾಗಿ ಸಾವಿರಾರು ರೈತ ಕುಟುಂಬಗಳು ತಮ್ಮ ಸಮೃದ್ಧವಾದ ಜಮೀನು ನೀಡಿದ್ದಾರೆ. ಆದರೆ, ಸರ್ಕಾರ ಕೊಟ್ಟ ಪರಿಹಾರ ಎಕರೆಗೆ ಕೇವಲ ಮೂರ್‍ನಾಲ್ಕು ಸಾವಿರ ರೂ.. ಪರಿಹಾರದಲ್ಲಿ ಆದಂಥ ಅನ್ಯಾಯ ಸರಿಪಡಿಸಲು ಸತತ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಎಕರೆಗೆ 20 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯನಿಗೆ ಅರ್ಹತೆ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು. ನ್ಯಾಯ ಸಿಗದಿದ್ದರೆ ಎಲ್ಲ ಚುನಾವಣೆ ಬಹಿಷ್ಕರಿಸಿ, ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಕ, ಬಂಡೆಪ್ಪ ಖಾಶೆಂಪುರ ಮತ್ತು ರಹೀಮ್ ಖಾನ್ ಮಾತನಾಡಿದರು. ಎಂಎಲ್ಸಿಗಳಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ, ಡಾ| ಶೈಲೇಂದ್ರ ಬೆಲ್ದಾಳೆ, ಅಶೋಕ ಖೇಣಿ, ವಿರೂಪಾಕ್ಷ ಗಾದಗಿ, ರಾಜಪ್ಪ ಕಮಲಪುರೆ, ಮಲ್ಲಿಕಾರ್ಜುನ ಮುತ್ತಣ್ಣ, ಸಂಜಯ ಡಾಕುಳಗಿ, ಭೀಮರಡ್ಡಿ, ರಾಜಕುಮಾರ ಚಿಲ್ಲರ್ಗಿ ಇದ್ದರು.