Advertisement

ಸಿಸಿ ಕೇಂದ್ರಗಳಿಗೆ ತಾಜಾ ಆಹಾರ ಒದಗಿಸಿ

05:15 PM Aug 28, 2020 | Suhan S |

ತುಮಕೂರು: ಜಿಲ್ಲೆಯಲ್ಲಿರುವ ಕೋವಿಡ್‌ ಕೇರ್‌ (ಸಿ.ಸಿ) ಕೇಂದ್ರಗಳಲ್ಲಿ ಸೋಂಕಿತರಿಗೆ ತಾಜಾ ಆಹಾರ ಸೇರಿದಂತೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್‌ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕ್ಯಾತಸಂದ್ರದಲ್ಲಿರುವ ಕೋವಿಡ್‌ ಕೇಂದ್ರವೂ ಸೇರಿದಂತೆ ಜಿಲ್ಲೆಯಲ್ಲಿರುವ ಕೇಂದ್ರ ಗಳಲ್ಲಿ ತಾಜಾ ಆಹಾರ, ಹೊದಿಕೆ ಮತ್ತಿತರ ಅಗತ್ಯ ಸೌಲಭ್ಯಗಳಲ್ಲಿ ವ್ಯತ್ಯಯವಾಗದಂತೆ ಪೂರೈಸಬೇಕು ಎಂದರು.

ಹೋಂ ಕ್ವಾರಂಟೈನ್‌ಗೆ ಅವಕಾಶ: ವೈದ್ಯ ಕೀಯ ಸೌಲಭ್ಯ ಆಸ್ಪತ್ರೆಗಳು ಹತ್ತಿರ ಇರುವ ಹಾಗೂ ಸೌಕರ್ಯವಿರುವ ಸೋಂಕಿತರು ಬಯಸಿದ್ದಲ್ಲಿ ಹೋಂ ಐಸೋಲೇಷನ್‌ಗೆ ಅವಕಾಶ ನೀಡಿ, ಹೃದಯಾಘಾತ ಸೇರಿದಂತೆ ಕೋವಿಡೇತರ ಕಾರಣಗಳಿಂದ ಮೃತಪಟ್ಟರೆ ಮೃತದೇಹಗಳನ್ನು ಕುಟುಂಬಸ್ಥರಿಗೆ ವಿಳಂಬ ಮಾಡದೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ಸಮಸ್ಯೆ ಪರಿಹಾರ: ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಕ್ಕೆ ಆಗ್ಗಿಂದಾಗ್ಗೆ ಡಿಎಚ್‌ಒ ಅವರು ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಅಲ್ಲದೆ ಸೋಂಕಿತರ ಸಮಸ್ಯೆ ಗಳನ್ನು ಆಲಿಸಿ ಪರಿಹರಿಸಲಾಗುತ್ತಿದೆ. ಉತ್ತಮ ತಾಜಾ ಆಹಾರವನ್ನು ಒದಗಿಸಲಾಗುತ್ತಿದೆ. ಅದೇ ಆಹಾರವನ್ನು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಸೇವಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಸಚಿವರ ಗಮನಕ್ಕೆ ತಂದರು.

ಸೂಕ್ತ ಚಿಕಿತ್ಸೆ ಪಡೆಯಿರಿ: ಸೋಂಕಿತರು ತಡವಾಗಿ ಆಸ್ಪತ್ರೆಗಳಿಗೆ ಬರುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿಯ ವರೆಗೂ ಜಿಲ್ಲೆಯಲ್ಲಿ ಆಗಿರುವ ಹೆಚ್ಚಿನ ಕೊರೋನಾ ಸಾವಿನ ಪ್ರಕರಣಗಳು ಆಸ್ಪತ್ರೆಗೆ ವಿಳಂಬವಾಗಿ ಬಂದವರದಾಗಿವೆ. ಸೋಂಕಿತ ಲಕ್ಷಣಗಳು ಕಂಡು ಬಂದ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಆಗಮಿಸಿ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆದರೆ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.

Advertisement

ಶಿರಾ ಕೆರೆಗೆ ನೀರು ಹರಿಸಿ: ಶಿರಾ ಪಟ್ಟಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವುದರಿಂದ ಶಿರಾ ಕೆರೆಗೆ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಅವರು ಇದೇ ಸಂದರ್ಭದಲ್ಲಿ ಹೇಮಾವತಿ ನಾಲಾ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ಕಳೆದ ಬಾರಿಯೂ ಕಡಿಮೆ ನೀರನ್ನು ಹರಿಸಲಾಗಿದೆ. ಶಿರಾದಲ್ಲಿ ಕುಡಿಯುವ ನೀರುಸಮಸ್ಯೆ ಇದ್ದು, ಕುಡಿಯುವ ನೀರು ಕೆರೆಗೆ ನೀರು ಹರಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ. ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಶಿರಾ ಕೆರೆಗೆ ನೀರು ಹರಿಸಬೇಕು ಎಂದು ತಿಳಿಸಿದರು.

ಕೆರೆಗಳ ಬಗ್ಗೆ ಮಾಹಿತಿ: ಬೆಂಗಳೂರಿನ ಟ್ರೀಟೇಡ್‌ ನೀರನ್ನು ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ತುಮಕೂರು ಗ್ರಾಮಾಂತರದ 8-10 ಕೆರೆಗಳಿಗೆ ಟ್ರಿಟೇಡ್‌ ನೀರು ಹರಿಸುವ ಸಂಬಂಧ ಕೆರೆಗಳ ಬಗ್ಗೆ ಮಾಹಿತಿ ನೀಡಿ ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

ಜಿಪಂ ಸಿಇಒ ಶುಭಕಲ್ಯಾಣ್‌, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌, ಉಪವಿಭಾಗಾಧಿಕಾರಿಗಳಾದ ಅಜಯ್‌, ಡಾ. ನಂದಿನಿದೇವಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next