ನವದೆಹಲಿ: ಶಿವಸೇನಾ ಪಕ್ಷದಲ್ಲಿ ತಾವು ಹೊಂದಿರುವ ಸದಸ್ಯರ ಬಹುಮತವನ್ನು ಸಾಬೀತುಪಡಿಸಲು ಸಾಕ್ಷ್ಯವನ್ನು ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉದ್ಧವ್ ಠಾಕ್ರೆಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಾಫಿನಾಡಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ನಿವಾಸಿಗಳು: ಪೊಲೀಸ್ ದಾಳಿ
ಪಕ್ಷದ ಚಿಹ್ನೆಯಾದ ಬಿಲ್ಲು ಮತ್ತು ಬಾಣ ತಮಗೆ ಸೇರಿದ್ದು ಎಂದು ಉದ್ಧವ್ ಮತ್ತು ಶಿಂಧೆ ಬಣ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಎರಡೂ ಬಣಗಳೂ ಆಗಸ್ಟ್ 8ರಂದು 1 ಗಂಟೆಯೊಳಗೆ ಸಾಕ್ಷ್ಯವನ್ನು ಒದಗಿಸಬೇಕೆಂದು ಸೂಚನೆ ನೀಡಿದೆ.
ತಮ್ಮದೇ ನಿಜವಾದ ಶಿವಸೇನಾ ಎಂದು ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂಧೆ ಬಣ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಇದೀಗ ಜಟಾಪಟಿ ಚುನಾವಣಾ ಆಯೋಗದ ಮೆಟ್ಟಿಲೇರುವಂತಾಗಿದೆ.
ಪಕ್ಷದ ಕೆಲವು ಸದಸ್ಯರು, ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಉದ್ಧವ್ ಠಾಕ್ರೆ ಬಣದ ಅನಿಲ್ ದೇಸಾಯಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲ ಶಿಂಧೆ ಬಣ ಶಿವಸೇನಾ ಅಥವಾ ಬಾಳಾ ಸಾಹೇಬ್ ಅವರ ಹೆಸರನ್ನು ಬಳಸಿಕೊಂಡು ಯಾವುದೇ ರಾಜಕೀಯ ಪಕ್ಷ ಸ್ಥಾಪಿಸುವಂತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.