ನವದೆಹಲಿ:ಭಾರತೀಯ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆಗೆ ನೇಮಕಗೊಂಡಿದ್ದ ಲೆಫ್ಟಿನೆಂಟ್ (ನಿವೃತ್ತ) ಜನರಲ್ ಅನಿಲ್ ಚೌಹಾಣ್ ಶುಕ್ರವಾರ (ಸೆಪ್ಟೆಂಬರ್ 30) ಅಧಿಕಾರ ಸ್ವೀಕರಿಸಿದ್ದಾರೆ.
ಇದನ್ನೂ ಓದಿ:ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ… ತೋತಾಪುರಿ ಸಿಕ್ಕಿದ್ದು ನನ್ನ ಪುಣ್ಯ ಎಂದ ಜಗ್ಗೇಶ್
ದೆಹಲಿಯ ಸೌತ್ ಬ್ಲಾಕ್ ನಲ್ಲಿ ಸಿಡಿಎಸ್ ಚೌಹಾಣ್ ಅವರು ಗೌರವ ವಂದನೆ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ, ಭಾರತೀಯ ಸೇನಾಪಡೆಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ನಿರೀಕ್ಷೆಗಳನ್ನು ಹಾಗೂ ಎಲ್ಲಾ ರೀತಿಯ ಸವಾಲುಗಳನ್ನು ಒಗ್ಗಟ್ಟಾಗಿ ಈಡೇರಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಭಾರತೀಯ ಸೇನಾಪಡೆಯ ಅತ್ಯುನ್ನತ ಹೊಣೆಗಾರಿಕೆಯನ್ನು ಹೊರಲು ತುಂಬಾ ಹೆಮ್ಮೆ ಪಡುತ್ತೇನೆ ಎಂದ ಚೌಹಾಣ್ ಅವರು, ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥನಾಗಿ ಎಲ್ಲರ ನಿರೀಕ್ಷೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.
ಜನರಲ್ ಬಿಪಿನ್ ರಾವತ್ ಅವರ ನಿಧನದ ನಂತರ ಜನರಲ್ ಅನಿಲ್ ಚೌಹಾಣ್ ಅವರನ್ನು ಸಿಡಿಎಸ್ ಆಗಿ ಆಯ್ಕೆ ಮಾಡಲಾಗಿತ್ತು. ಜನರಲ್ ಬಿಪಿನ್ ರಾವತ್ ನಂತರ ಚೌಹಾಣ್ ಅವರು ಎರಡನೇ ಸಿಡಿಎಸ್ ಆಗಿ ನೇಮಕಗೊಂಡಿದ್ದಾರೆ.
ಸಿಡಿಎಸ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಆರ್ಮಿ ಚೀಫ್ ಜನರಲ್ ಮನೋಜ್ ಪಾಂಡೆ, ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ವಿ.ಆರ್ ಚೌಧರಿ, ನೌಕಾಪಡೆಯ ಉಪ ಮುಖ್ಯಸ್ಥ ಅಡ್ಮಿರಲ್ ಎಸ್ ಎನ್ ಘೋರ್ಮಡೆ ಮತ್ತು ಏರ್ ಮಾರ್ಷಲ್ ಬಿಆರ್ ಕೃಷ್ಣ ಉಪಸ್ಥಿತರಿದ್ದರು.