ವಿಟ್ಲ : ವಿದ್ಯಾಭ್ಯಾಸದ ಬೆಲೆ ಅರಿತಿರಬೇಕು. ನಿರೀಕ್ಷಿತ ಅಂಕ ಗಳಿಸಲು ಸಾಧ್ಯವಾಗದೇ ಹೋದರೆ ತಲೆಕೆಡಿಸಿಕೊಳ್ಳಬಾರದು. ಆದರೆ ಜೀವನದಲ್ಲಿ ಅನುತ್ತೀರ್ಣರಾಗಬಾರದು. ಶಿಸ್ತನ್ನು ಉಳಿಸಿಕೊಂಡಾಗ ಜೀವನ ಯಶಸ್ವಿಯಾಗುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಾಭಿಮಾನದ ಬದುಕಿನ ಸಂದೇಶ ರವಾನೆ ಮಾಡಬೇಕು ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶಿಸಲು ವಾರ್ಷಿಕೋತ್ಸವ ವೇದಿಕೆಯಾಗಿದೆ.ವಿದ್ಯಾರ್ಥಿಗಳ ಜೀವನದಲ್ಲಿ ಸಮಯಪ್ರಜ್ಞೆ ಮೂಡಿದಾಗ ಅವರು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ ಎಂದು ತಿಳಿಸಿದರು.
ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ| ಪ್ರಭಾಕರ ಶಿಶಿಲ ಮಾತನಾಡಿ, ಆಸಕ್ತಿ ಹಾಗೂ ಶ್ರದ್ಧೆಯಿಂದ ವಿಷಯವನ್ನು ಅರಿತುಕೊಳ್ಳಬೇಕು. ಅವುಗಳನ್ನು ಅನುಷ್ಠಾನಗೊಳಿಸಿದಾಗ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಏಕಾಗ್ರತೆ, ಶಿಸ್ತು, ಸೃಜನಶೀಲತೆ ಇದ್ದಾಗ ಯಶಸ್ಸು ಲಭಿಸುತ್ತದೆ ಎಂದು ಹೇಳಿದರು.
ಸಾಂಸ್ಕೃತಿಕ ಸಂಘದ ಸಂಚಾಲಕಿ, ಉಪನ್ಯಾಸಕಿ ಚಕ್ರೇಶ್ವರೀ, ವಿದ್ಯಾರ್ಥಿ ಮುಖಂಡರಾದ ಸಂತೋಷ್ ಕುಮಾರ್, ಜಯಪ್ರಸಾದ್ ಕೆ., ಶಿವಪ್ಪ, ಸ್ವರ್ಣಲತಾ ಪಿ., ತನುಜಾ ಪಿ. ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲ ಶಂಕರ್ ಪಾಟಾಳಿ ವರದಿ ಮಂಡಿಸಿದರು. ಗ್ರಂಥಪಾಲಕ ರಾಮ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಕೆ. ಸ್ವಾಗತಿಸಿದರು. ಉಪನ್ಯಾಸಕಿ ವಿದ್ಯಾಸರಸ್ವತಿ ನಿರೂಪಿಸಿದರು. ಉಪನ್ಯಾಸಕಿ ವಿಶಾಲಾಕ್ಷಿ ವಂದಿಸಿದರು.