ಬೆಳಗಾವಿ: ಕಬ್ಬಿನ ದರ ನಿಗದಿ ಹಾಗೂ ಬಾಕಿ ಹಣ ಪಾವತಿಗೆ ಒತ್ತಾಯಿಸಿ ಜಿಲ್ಲಾದ್ಯಂತ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು. ಈ ಮಧ್ಯೆ, ಗೋಕಾಕ ಹಾಗೂ ಅಥಣಿ ನ್ಯಾಯವಾದಿಗಳು ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸುವ ಮೂಲಕ ಬೆಂಬಲ ಕಬ್ಬು ಬೆಳೆಗಾರರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಭಾರತೀಯ ಕೃಷಿಕ ಸಮಾಜದ ಕಾರ್ಯಕರ್ತರು ಹಾಗೂ ರೈತ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರೆ, ಬೈಲಹೊಂಗಲದಲ್ಲಿ ರೈತ ಸಂಘದ ಸದಸ್ಯರು ತಮ್ಮ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
“ಬೊಬ್ಬೆ’ ಹೊಡೆದರೂ ಬಾರದ “ಶ್ರೀಮಂತ’: ಅಥಣಿಯಲ್ಲಿ ರೈತ ಸಂಘದ ಸದಸ್ಯರು ಜಯಶ್ರೀ ಗುರನ್ನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇದೇ ವೇಳೆ, ತಾಲೂಕಿನ ಮುರಗುಂಡಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಐದನೇ ದಿನ ಪೂರೈಸಿತು. ಐದು ದಿನಗಳಿಂದ ರೈತರು ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದರೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸ್ಥಳಕ್ಕೆ ಬಂದು ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲವೆಂದು ಆರೋಪಿಸಿ ರೈತರು ಮಂಗಳವಾರ ಬೊಬ್ಬೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಭೆಗೆ ತೆರಳದ ರೈತರು: ಬೆಂಗಳೂರಿನಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿಗಳ ಸಭೆಗೆ ಬೆಳಗಾವಿಯ ಇಬ್ಬರು ರೈತ ಮುಖಂಡರು ಗೈರು ಹಾಜರಾಗಿದ್ದಾರೆ.
ನನಗೆ ಆಹ್ವಾನ ನೀಡಿಲ್ಲ. ಇದರಿಂದ ಬೇಸರ ಆಗಿಲ್ಲ. ಮುಖ್ಯಮಂತ್ರಿಗಳು ನನಗೆ ಎಷ್ಟೇ ಬೈಯ್ಯಲಿ. ಇದರಿಂದ ರೈತರಿಗೆ ಒಳ್ಳೆಯದಾದರೆ ಅಷ್ಟೇ ಸಾಕು. ನಮ್ಮ ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ದರ ಸಿಗಬೇಕು. ಬಾಕಿ ಹಣ ಕೂಡಲೇ ಪಾವತಿ ಮಾಡಬೇಕು ಎಂಬುದು ನಮ್ಮ ಬೇಡಿಕೆ.
● ಜಯಶ್ರೀ ಗುರನ್ನವರ, ರೈತ ಮಹಿಳೆ