ಯಡ್ರಾಮಿ: ತಾಲೂಕು ಬೆಳೆ ನಷ್ಟ ಪರಿಹಾರದಿಂದ ವಂಚಿತವಾಗಿದ್ದನ್ನು ಖಂಡಿಸಿ ತಾಲೂಕು ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ್ ಕಾರ್ಯಾಲಯ ಬಂದ್ ಮಾಡಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದವು.
ಮಂಗಳವಾರ ಬೆಳಗ್ಗೆ ನೂರಾರು ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸೇರಿ, ತಾಲೂಕಿನ ಕೃಷಿ, ಕಂದಾಯ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಘೋಷಣೆ ಹಾಕುತ್ತಾ, ತಹಶೀಲ್ದಾರ್ ಸಿಬ್ಬಂದಿಗಳನ್ನು ಕಚೇರಿಯಿಂದ ಹೊರಹಾಕಿ ಕಾರ್ಯಾಲಯ ಬಂದ್ ಮಾಡಿ ಪ್ರತಿಭಟನೆ ಮಾಡಿದರು.
ಈ ವೇಳೆ ಕರವೇ ಮುಖಂಡ ಡಾ| ವಿಶ್ವನಾಥ ಪಾಟೀಲ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳ ಜಮೀನುಗಳಲ್ಲಿನ ತೊಗರಿ, ಹತ್ತಿ, ಸೂರ್ಯಪಾನ ಬೆಳೆಗಳು ನಾಶವಾಗಿ, ರೈತರು ಈ ವರ್ಷವೂ ಕಷ್ಟದ ಸ್ಥಿತಿಯಲ್ಲಿದ್ದಾರೆ. ಇಲ್ಲಿನ ಅಧಿಕಾರಿಗಳು ಬೆಳೆ ಹಾಳಾದ ಕುರಿತು ಸ್ಪಷ್ಟ ಸಮೀಕ್ಷೆ ಮಾಡಿ, ನಿಖರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸದೇ ರೈತರಿಗೆ ಅನ್ಯಾಯ ಮಾಡುವಂತ ಹೀನ ಕೆಲಸ ಮಾಡಿದ್ದಾರೆ. ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ನಲ್ಲಿಯೂ ಮಳೆ ಬಂದಿದೆ. ತೊಗರಿ ಬೆಳೆ ಹೂವು ಹಿಡಿಯುವ ಸಂದರ್ಭದಲ್ಲಿ ಭಯಾನಕ ಮಂಜು ಆವರಿಸಿದ ಪರಿಣಾಮ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಬೆಳೆ ಪರಿಹಾರದಿಂದ ತಾಲೂಕು ವಂಚಿತವಾಗಿದೆ ಎಂದು ಆಕೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಈರಣ್ಣ ಭಜಂತ್ರಿ ಮಾತನಾಡಿ, ಇಲ್ಲಿನ ಅಧಿಕಾರಿಗಳು ಈ ವರ್ಷದ ಬೆಳೆಗಳು ನಾಶ ಹೊಂದಿಲ್ಲ ಎಂದು ತಪ್ಪು ಮಾಹಿತಿ ನೀಡಿದ ಕಾರಣಕ್ಕಾಗಿ ತಾಲೂಕಿನ ರೈತರಿಗೆ ಪರಿಹಾರ ಸಿಕ್ಕಿಲ್ಲ. ಯಾವ ಅಧಿಕಾರಿಗಳು ಜಮೀನುಗಳಿಗೆ ಖುದ್ದು ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಚಂದ್ರು ಮಲ್ಲಾಬಾದ, ಶಫೀವುಲ್ಲಾದ ಖನಿ, ರಾಜುಗೌಡ ಪಾಟೀಲ, ಅಮರನಾಥ ಕುಳಗೇರಿ, ಸಿದ್ಧು ಸುಂಬಡ, ಗುರಣ್ಣ ದೊಡಮನಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದರು.
ಯಡ್ರಾಮಿ ತಾಲೂಕಿನಲ್ಲಿ ಬೆಳೆ ನಷ್ಟದಕುರಿತ ತಂತ್ರಾಂಶವನ್ನು ನಮಗೆ ನೀಡಿಲ್ಲ. ಪ್ರಸಕ್ತ ವರ್ಷದಲ್ಲಾದ ಬೆಳೆ ನಷ್ಟದ ಪ್ರಮಾಣದ ಬಗ್ಗೆಕಳೆದ ತಿಂಗಳಿನಲ್ಲಿ ಮಾಹಿತಿ ಕಳಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಮೇಲಧಿಕಾರಿಗಳ ಸೂಚನೆಯಂತೆ ಮುಂದಿನಕ್ರಮ ಕೈಗೊಳ್ಳಲಾಗುವುದು.
-ಶಾಂತಗೌಡ ಬಿರಾದಾರ, ತಹಶೀಲ್ದಾರ್