ಹುಬ್ಬಳ್ಳಿ: ಪೌರ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಪಜಾ, ಪಪಂ ಪೌರ ಕಾರ್ಮಿಕರ ಮತ್ತು ನೌಕರರ ಸಂಘದಿಂದ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಪೌರ ಕಾರ್ಮಿಕರನ್ನು ಮರು ನಿಯೋಜಿಸಿರುವ ಪಾಲಿಕೆಯ ಅವೈಜ್ಞಾನಿಕ ನೀತಿ ಹಿಂಪಡೆಯಬೇಕು, ಪೌರಕಾರ್ಮಿಕರ ಸಂಘದ ಬಹುದಿನಗಳ ಹಕ್ಕೊತ್ತಾಯ ಈಡೇರಿಸಲು ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ನಡವಳಿಗಳನ್ನು ಅನುಷ್ಠಾನಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಕಾಯಂ/ನೇರ ವೇತನ ಪಾವತಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಯಾವುದೇ ಸಾರಿಗೆ ಸೌಲಭ್ಯಗಳಿಲ್ಲದೆ ಸುಮಾರು 10 ರಿಂದ 12ಕಿ.ಮೀ ದೂರ ಸಂಚರಿಸಿ ಸ್ವಚ್ಛತಾ ಕೆಲಸ ನಿರ್ವಹಿಸಬೇಕಿದೆ. ಕಾರ್ಮಿಕ ಕಾಯ್ದೆಗಳನ್ವಯ ನಿಗದಿತ ಸಮಯಕ್ಕೆ ಪೌರ ಕಾರ್ಮಿಕರಿಗೆ ಮಾಸಿಕ ವೇತನ ಪಾವಸುತ್ತಿಲ್ಲ.
ವಿವಿಧ ಕಾರ್ಮಿಕ ಕಾಯ್ದೆಗಳ ಸೌಲಭ್ಯಗಳಿಂದ ವಂಚಿಸಲಾಗಿದೆ. ನವನಗರ, ವಿಮಾನ ನಿಲ್ದಾಣ, ಗೋಕುಲ ರಸ್ತೆ ಮುಂತಾದ ದೂರದ ಪ್ರದೇಶಗಳಿಗೆ ಪೌರಕಾರ್ಮಿಕರು ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸದೇ ಪ್ರಸ್ತುತ ಪಾಲಿಕೆಗಿರುವ ಅವೈಜ್ಞಾನಿಕ, ಶೋಷಣೆ, ಪೌರ ಕಾರ್ಮಿಕರಿಗೆ ಮಾರಕವಾದ ನೀತಿಯನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ.
ಕಳೆದ ಮೂರು ವರ್ಷಗಳಿಂದ ಪೌರಕಾರ್ಮಿಕರ ಸಂಘದ ನಿರಂತರ ಹೋರಾಟದಿಂದ ಬೆಳಗಿನ ಉಪಾಹಾರ ಅನುಷ್ಠಾನಗೊಂಡಿದೆ. ಆದರೆ ಕೆಲ ಅಧಿಕಾರಿಗಳು ಸರ್ಕಾರದ ಆದೇಶದಲ್ಲಿ ಹಾಗೂ ಆಯೋಗದ ನಿರ್ದೇಶನದಲ್ಲಿ ಕಡ್ಡಾಯವಾಗಿ ಬೆಳಗಿನ ಉಪಾಹಾರ ಪೂರೈಸಬೇಕೆಂದು ಸ್ಪಷ್ಟಪಡಿಸಿದ್ದರೂ ಅದನ್ನು ಧಿಕ್ಕರಿಸಿ ಪೌರಕಾರ್ಮಿಕರಿಂದ ಬಲವಂತವಾಗಿ ಸಹಿ ಪಡೆದು ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ನೀಡುತ್ತಿಲ್ಲ. ಕೂಡಲೇ ಉತ್ತಮ ಗುಣಮಟ್ಟದ ಬೆಳಗಿನ ಉಪಾಹಾರ ಪೌರಕಾರ್ಮಿಕರಿಗೆ ಪೂರೈಸಬೇಕು.
ಪೌರಕಾರ್ಮಿಕರಿಗೆ ಕನಿಷ್ಠ ವೇತನ ವ್ಯತ್ಯಾಸ ಬಾಕಿ 9 ಕೋಟಿ ರೂ, ಪಿ.ಎಫ್. ಮೊತ್ತದ 3 ಕೋಟಿ ರೂ, ಮಹಿಳಾ ಪೌರಕಾರ್ಮಿಕರಿಗೆ ಮೆಡಿಕಲ್ ಬೋನಸ್ 21,71 ಲಕ್ಷ ರೂ., ತುಟ್ಟಿಭತ್ಯೆ ಹಾಗೂ 2 ಕೋಟಿಗಳನ್ನು ಗುತ್ತಿಗೆ ಪೌರ ಕಾರ್ಮಿಕರಿಗೆ ಪಾವತಿಸಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಲಿಖೀತ ನಿರ್ದೇಶನ ನೀಡಿದ್ದರೂ ಒಟ್ಟು 14 ಕೋಟಿಗೂ ಅಧಿಕ ಬಾಕಿ ಮೊತ್ತವನ್ನು ಪೌರಕಾರ್ಮಿಕರಿಗೆ ಪಾವತಿಸಿಲ್ಲ. ಈ ಕೂಡಲೇ ಬಾಕಿ ಪಾವತಿಸಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಡಾ|ವಿಜಯ ಗುಂಟ್ರಾಳ, ಗಾಳಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಯಲ್ಲವ್ವ ದೇವರಗುಡಿಹಾಳ, ಕಸ್ತೂರೆವ್ವ ಬೆಳಗುಂದಿ, ಅನಿತಾ ಈನಗೊಂಡ, ಕನಕಪ್ಪ ಕೋಟಬಾಗಿ, ನಾಗಮ್ಮಾ ಗೊಲ್ಲರ, ಲಕ್ಷ್ಮೀ ಬೇತಾದಲ್ಲಿ, ವಿಜಯಕುಮಾರ ಗದಗ, ರಾಜು ನಾಗರಾಳ, ರಮೇಶ ನಾಗನೂರ, ಆನಂದ ಬಾವೂರ, ಶರೀಫ ಮಸರಕಲ್ಲ, ಶಿವಾನಂದ ತಗ್ಗಿನಮನಿ ಮೊದಲಾದವರಿದ್ದರು.