ಮಂಗಳೂರು: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿನ ಕಾರಣ ಮೃತಪಟ್ಟ ಮಹಿಳೆಯ ಶವಸಂಸ್ಕಾರಕ್ಕಾಗಿ ನಡೆದ ಘಟನೆಗಳನ್ನು ಮಾಜಿ ಸಚಿವ ಯು ಟಿ ಖಾದರ್ ಖಂಡಿಸಿದ್ದು, ಇದು ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ ಎಂದಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಮೃತ ಶರೀರರದ ಜೊತೆ ಕಠೋರವಾಗಿ ವರ್ತಿಸಿ ಎಂದು ಯಾವ ಧರ್ಮವೂ ಹೇಳಿಲ್ಲ. ಶಾಸಕರೇ ಮುಂದೆ ನಿಂತು ಪ್ರತಿಭಟಿಸಿದ್ದು ಆಶ್ಚರ್ಯ ಆಗುತ್ತಿದೆ. ಶಾಸಕ ಸ್ಥಾನ ಶಾಶ್ವತವಲ್ಲ, ಮನುಷ್ಯತ್ವವಷ್ಟೇ ಮುಖ್ಯ. ಶಾಸಕರ ಮನುಷ್ಯತ್ವ ಇಲ್ಲದ ವರ್ತನೆಯನ್ನ ಖಂಡಿಸ್ತೇನೆ ಎಂದರು.
ಕೋವಿಡ್-19 ಸೋಂಕು ಕಾರಣದಿಂದ 75 ವರ್ಷದ ಮಹಿಳೆ ಗುರುವಾರ ಅಸುನೀಗಿದ್ದು, ಆಕೆಯ ಅಂತ್ಯ ಸಂಸ್ಕಾರಕ್ಕೆ ಮಂಗಳೂರಿನ ಪಚ್ಚನಾಡಿ, ಬೋಳೂರು, ನಂದಿಗುಡ್ಡೆ, ಬಳಿಕ ಮೂಡುಶೆಡ್ಡೆ ಸ್ಮಶಾನಗಳಲ್ಲಿ ಅವಕಾಶ ನಿರಾಕರಿಸಿ ಜನರು ಪ್ರತಿಭಟನೆ ನಡೆಸಿದ್ದರು. ಶಾಸಕ ಭರತ್ ಶೆಟ್ಟಿ ಕೂಡಾ ಇಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ನಿರಾಕರಿಸಿದ್ದರು. ನಂತರ ಬಂಟ್ವಾಳ ಬಿ.ಸಿ ರೋಡ್ ನ ಕೈಕುಂಜೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.
ಈ ವಿಚಾರದಲ್ಲಿ ಶಾಸಕರ ನಡೆಯನ್ನು ಖಂಡಿಸಿದ ಖಾದರ್, ನಿನ್ನೆ ಘಟನೆ ನಡೆದ ಬಗ್ಗೆ ಜಿಲ್ಲಾಡಳಿತ ಮತ್ತು ಇಲ್ಲಿನ ಶಾಸಕರ ಬಗ್ಗೆ ಬೇಸರವಿದೆ. ಶಾಸಕರು ಮನುಷ್ಯತ್ವ ಅಳವಡಿಸಿಕೊಳ್ಳಬೇಕು, ಇದರಿಂದ ಜನರಿಗೆ ನೋವಾಗಿದೆ ಎಂದರು.
ದ.ಕ ಜಿಲ್ಲಾಡಳಿತ ಕೋವಿಡ್ ಆಕ್ಷನ್ ಪ್ಲಾನ್ ನಲ್ಲಿ ಅಂತ್ಯ ಸಂಸ್ಕಾರದ ಬಗ್ಗೆಯೂ ಯೋಚಿಸಬೇಕು. ಜಿಲ್ಲಾಡಳಿತ ಈ ವಿಚಾರದಲ್ಲಿ ವಿಫಲವಾಗಿದೆ, ಇದು ರಾಜ್ಯದ ಬೇರೆ ಕಡೆ ಆಗಬಾರದು. ಆರೋಗ್ಯ ಸಚಿವರು, ಕಂದಾಯ ಸಚಿವರು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಆಗ್ರಹಿಸಿದರು.