Advertisement

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

10:58 AM Mar 14, 2018 | Team Udayavani |

ಮಹಾನಗರ: ಕೆಲವೊಂದು ಬೇಡಿಕೆಯ ಈಡೇರಿಕೆಗಾಗಿ ಸಿಐಟಿಯು ನೇತೃತ್ವದಲ್ಲಿ ಭವಿಷ್ಯನಿಧಿ ಕಚೇರಿಗೆ ಕಾರ್ಮಿಕರಿಂದ ಮಂಗಳವಾರ ಮುತ್ತಿಗೆ ಹಾಕಲಾಯಿತು.

Advertisement

ಸಂಸ್ಥೆಯಲ್ಲಿರುವ ಸದಸ್ಯರಿಗೆ ಆಧಾರ ಕಾರ್ಡ್‌ನ್ನು ಯಾವುದೇ ಕಾರಣಕ್ಕೂ ಕಡ್ಡಾಯಗೊಳಿಸಬಾರದು, ಈಗಾಗಲೇ ಪ್ರೊವಿಡೆಂಟ್‌ ಫ‌ಂಡ್‌ ಕಚೇರಿಯಲ್ಲಿ ದಾಖಲಾಗಿರುವ ಹುಟ್ಟಿದ ದಿನಾಂಕವನ್ನು ಅಧಿಕೃತಗೊಳಿಸಬೇಕು, ಪಿಂಚಣಿದಾರರಿಗೆ ಅವರ ಸೌಲಭ್ಯವನ್ನು ಪಡೆಯುವರೇ ಕ್ರಮ ನಿಯಮವನ್ನು ಸರಳಗೊಳಿಸಬೇಕು, ಸೇರಿದಂತೆ ಹಲವಾರು ಬೇಡಿಕೆಗಳನ್ನು ಒತ್ತಾಯಿಸಿ ಈ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಾಮಾಜಿಕ ಭದ್ರತೆ ನಾಶ
ಕಾರ್ಮಿಕರನ್ನು ಉದ್ದೇಶಿಸಿ ಸಿಐಟಿಯು ಬೀಡಿ ಕಾರ್ಮಿಕರ ಫೆಡರೇಶನ್‌ ಅಧ್ಯಕ್ಷ ವಸಂತ ಆಚಾರಿ ಮಾತನಾಡಿ, ನವ ಉದಾರೀಕರಣ ನೀತಿಯನ್ನು ವೇಗವಾಗಿ ಜಾರಿ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ಹಿತಾಸಕ್ತಿಗಿಂತಲೂ ಕಾರ್ಪೊರೇಟ್‌ ರಂಗದವರ ಹಿತಾಸಕ್ತಿಯನ್ನು ಕಾಪಾಡುತ್ತಿದೆ. ಸಾಮಾಜಿಕ ಭದ್ರತೆಯನ್ನು ಕೂಡ ಈ ಕಾರಣಕ್ಕಾಗಿ ನಾಶ ಮಾಡುತ್ತಿದೆ. ಸಾಮಾಜಿಕ ನ್ಯಾಯ ಎಂಬುದು ಗಗನ ಕುಸುಮವಾಗಿದೆ ಎಂದು ಹೇಳಿದರು.

ಪ್ರತಿಭಟನ ಪ್ರದರ್ಶನಗಾರರನ್ನು ಉದ್ದೇಶಿಸಿ ಸಿಐಟಿಯುನ ಮುಂದಾಳುಗಳಾದ ಯು.ಬಿ. ಲೋಕಯ್ಯ, ಸುನೀಲ್‌ ಕುಮಾರ್‌ ಬಜಾಲ್‌, ಡಿವೈಎಫ್‌ ಐನ ರಾಜ್ಯಾಧ್ಯಕ್ಷ ಮುನೀರ್‌, ಡಿವೈಎಫ್‌ ಐನ ನಾಯಕ ನಿತಿನ್‌ ಕುಮಾರ್‌ ಕುತ್ತಾರ್‌, ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್‌, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಬಜಾಲ್‌, ಕಾರ್ಮಿಕ ಮುಂದಾಳುಗಳಾದ ಪದ್ಮಾವತಿ ಶೆಟ್ಟಿ, ಜಯಂತಿ ಬಿ. ಶೆಟ್ಟಿ, ಭಾರತಿ ಬೋಳಾರ್‌ ಅವರು ಮಾತನಾಡಿದರು.

ಇದೇ ವೇಳೆ ಭವಿಷ್ಯನಿಧಿ ಅಧಿಕಾರಿಗಳು ಸಿಐಟಿಯು ಉನ್ನತ ಮಟ್ಟದ ನಿಯೋಗದೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಕಂಡುಕೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಕಾರ್ಮಿಕ ಮುಂದಾಳುಗಳಾದ ಸದಾಶಿವ ದಾಸ್‌, ಬಾಬು ದೇವಾಡಿಗ, ಜಯಂತ ನಾಯ್ಕ, ಗಂಗಯ್ಯ ಅಮೀನ್‌, ರಾಮಣ್ಣ ವಿಟ್ಲ, ರಾಧಾ, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ರೋಹಿಣಿ, ಗಿರಿಜಾ ಮೂಡಬಿದಿರೆ ಅವರು ವಹಿಸಿದ್ದರು.

Advertisement

ಹಿಂಸೆ ಅನುಭವಿಸುವಂತಾಗಿದೆ
ಸುಪ್ರೀಂ ಕೋರ್ಟ್‌ ಆಧಾರ್‌ ಕಾರ್ಡ್‌ನ್ನು ಕಡ್ಡಾಯಗೊಳಿಸುವಂತಿಲ್ಲವೆಂದರೂ ಪ್ರೊವಿಡೆಂಟ್‌ ಫ‌ಂಡ್‌ ಇಲಾಖೆ ಆಧಾರ್‌ ಕಾರ್ಡ್‌ ಕಡ್ಡಾಯವೆನ್ನುತ್ತಿದೆ. ಇದರಿಂದಾಗಿ ಬೀಡಿ ಹಾಗೂ ಇತರ ಕಾರ್ಮಿಕರು ದಾಖಲೆ ಪತ್ರವನ್ನು ಸರಿಪಡಿಸಲು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸುವಂತಾಗಿದೆ. ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲದ ಸ್ಥಿತಿ ಎಂದು ತೀರ್ಮಾನಕ್ಕೆ ಬಂದು ತಮ್ಮ ಜೀವಿತಾವಧಿ ಕೊನೆಗೊಳಿಸುವ ಸ್ಥಿತಿ ನಿರ್ಮಾಣವಾಗಿದೆ.
– ವಸಂತ ಆಚಾರಿ
ಅಧ್ಯಕ್ಷ, ಸಿಐಟಿಯು ಬೀಡಿ ಕಾರ್ಮಿಕರ ಫೆಡರೇಶನ್‌

Advertisement

Udayavani is now on Telegram. Click here to join our channel and stay updated with the latest news.

Next