ವಾಷಿಂಗ್ಟನ್: ಅಂದು ಫ್ಲಾಯ್ಡ್, ಇಂದು ಬ್ರೂಕ್ಸ್… ಅಮೆರಿಕದಲ್ಲಿ ಕಪ್ಪು ವರ್ಣೀಯ ಸಮುದಾಯದ ಮತ್ತೂಬ್ಬನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.
ಪರಿಣಾಮ, ಈಗಾಗಲೇ ಜಾರ್ಜ್ ಫ್ಲಾಯ್ಡ್ ಹತ್ಯೆಯಿಂದ ಹೊತ್ತಿ ಉರಿಯುತ್ತಿದ್ದ ವರ್ಣಭೇದ ವಿರೋಧಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಮಿನ್ನಿಯಾಪೊಲೀಸ್ ನಗರದಲ್ಲಿ ಮೂರು ವಾರಗಳ ಹಿಂದೆ ಪೊಲೀಸರ ದೌರ್ಜನ್ಯಕ್ಕೆ ಜಾರ್ಜ್ ಫ್ಲಾಯ್ಡ್ ಬಲಿಯಾದ ಬಳಿಕ ಹೊತ್ತಿಕೊಂಡಿದ್ದ ಕಪ್ಪು ವರ್ಣೀಯ ಸಮುದಾಯದವರ ಆಕ್ರೋಶದ ಬೆಂಕಿ ನಂದುವ ಮೊದಲೇ ಅಟ್ಲಾಂಟಾದಲ್ಲಿ ಪೊಲೀಸರ ಗುಂಡಿಗೆ ಕಪ್ಪು ಸಮುದಾಯದ ಮತ್ತೂಬ್ಬ ಯುವಕ ಬಲಿಯಾಗಿದ್ದಾನೆ.
ಶನಿವಾರ ಅಟ್ಲಾಂಟಾ ನಗರದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಲು ಮುಂದಾದಾಗ 27ರ ಹರೆಯದ ರೇಷಾರ್ಡ್ ಬ್ರೂಕ್ಸ್ ಎಂಬ ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಹಿಂದಿನಿಂದ ಆತನಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಬ್ರೂಕ್ಸ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಪೊಲೀಸ್ ಮುಖ್ಯಸ್ಥೆ ರಾಜೀನಾಮೆ: ಪೊಲೀಸರು ಬ್ರೂಕ್ಸ್‌ಗೆ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿದೆ. ಅದರ ಬೆನ್ನಲ್ಲೇ ಅಮೆರಿಕದಲ್ಲಿ ಮತ್ತೆ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಘಟನೆಯ ಹೊಣೆ ಹೊತ್ತು ಅಟ್ಲಾಂಟಾ ನಗರ ಪೊಲೀಸ್ ಮುಖ್ಯಸ್ಥೆ ಎರಿಕಾ ಶೀಲ್ಡ್ಸ್ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರು ಅಂತಾರಾಜ್ಯ ಹೆದ್ದಾರಿಯೊಂದನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನೀಗ್ರೊ’ ಪದ ತೆಗೆದುಹಾಕಿ
ಕಪ್ಪು ವರ್ಣೀಯ ಸಮುದಾಯದವರನ್ನು ಗುರುತಿಸಲು ‘ನೀಗ್ರೊ’ ಪದ ಬಳಸುವುದರಿಂದ ದೇಶ ತಲೆತಗ್ಗಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಪೊಲೀಸ್ ದಾಖಲೆಗಳಲ್ಲಿ ನಮೂದಿಸಿರುವ ‘ನೀಗ್ರೊ’ ಪದ ತೆಗೆದುಹಾಕುವಂತೆ ಆದೇಶಿಸಿದೆ.
ಕಪ್ಪು ವರ್ಣದ ಜನರನ್ನು ಅವರ ದೇಶದ ಹೆಸರಿನಿಂದ ಗುರುತಿಸಬೇಕೇ ಹೊರತು ಜನಾಂಗೀಯ ನಿಂದನೆಗೆ ಸಮನಾಗಿರುವ ಪದ ಬಳಸಬಾರದು. ಒಂದೊಮ್ಮೆ ಮುಂದೆಯೂ ‘ನೀಗ್ರೊ’ ಪದ ಬಳಸಿದರೆ, ಅಂತಹ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕರಿಗೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.