Advertisement

ಕಾವೇರಿಗಾಗಿ ಮುಂದುವರಿದ ರೈತರ ಪ್ರತಿಭಟನೆ

10:05 AM Aug 08, 2017 | Team Udayavani |

ಮಂಡ್ಯ: ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಸೋಮವಾರವೂ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಮೈಮೇಲೆ ಸೆಗಣಿ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. 

Advertisement

ಈ ಮಧ್ಯೆ, ಸರ್‌ ಎಂ.ವಿ.ಪ್ರತಿಮೆ ಮುಂದೆ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಮಂಡ್ಯ ತಾಲೂಕಿನ ರೈತಸಂಘದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶ್ರೀರಂಗಪಟ್ಟಣದಲ್ಲಿ ರೈತ ಮುಖಂಡ ಕೆ.ಎಸ್‌.ನಂಜುಂಡೇಗೌಡರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರೈತರ ನಿರಂತರ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರದಲ್ಲಿ ಕಬಿನಿ ನಾಲೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಾಮನಗರ ಜಿಲ್ಲೆ ಚನ್ನಪಟ್ಟಣದ ಕುಡಿನೀರು ಕಟ್ಟೆ ಬಳಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ
ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಮಳೆ ಇಳಿಮುಖ ಬೆಂಗಳೂರು: ರಾಜ್ಯದಲ್ಲಿ ಮಳೆ ಇಳಿಮುಖವಾಗಿದ್ದು, ಕರಾವಳಿ ಹೊರತುಪಡಿಸಿದರೆ ಬಹುತೇಕ ಎಲ್ಲ ಭಾಗಗಳಲ್ಲಿ
ಒಣಹವೆಯಿದೆ. ಇನ್ನೂ ಮೂರ್‍ನಾಲ್ಕು ದಿನ ಇದೇ ವಾತಾವರಣ ಮುಂದುವರಿಯಲಿದೆ. ಕಳೆದ ಮೂರ್‍ನಾಲ್ಕು ದಿನ ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂಗಾರು ಮಳೆ ಕೊಂಚ ಚುರುಕುಗೊಂಡಂತೆ ಕಂಡುಬಂತು. ಆದರೆ, ಸೋಮವಾರದಿಂದ ಮತ್ತೆ ಇಳಿಮುಖವಾಗಿದೆ.  ಕರಾವಳಿಯಲ್ಲಿ ಮುಂದಿನ ಎರಡು ದಿನಗಳು ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಉಳಿದೆಡೆ ಒಣಹವೆ ಅಥವಾ ಹಗುರ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ
ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ 8.30ಕ್ಕೆ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ, ಕುಂದಾಪುರ, ಕೊಲ್ಲೂರು, ಕೋಟಾ, ಕೊಡಗಿನ ವಿರಾಜಪೇಟೆ, ಮಾದಾಪುರ, ಶಿವಮೊಗ್ಗ, ಹುಂಚದಕಟ್ಟೆ, ಭದ್ರಾವತಿ, ಚಿಕ್ಕಮಗಳೂರಿನ ಅಜ್ಜಂಪುರ, ಕಮ್ಮರಡಿ,
ಶೃಂಗೇರಿ ಮತ್ತಿತರ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಹೇಮೆಗಾಗಿ ಗುಬ್ಬಿ ಬಂದ್‌
ತುಮಕೂರು: ಹೇಮಾವತಿ ಜಲಾಶಯದಿಂದ ಕೂಡಲೇ ನೀರು ಹರಿಸುವಂತೆ ಆಗ್ರಹಿಸಿ ಸೋಮವಾರ ತುಮಕೂರು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ, ಬಂದ್‌ ಆಚರಿಸಲಾಯಿತು. ಪ್ರತಿಭಟನಾರ್ಥವಾಗಿ ತಿಪಟೂರು, ಗುಬ್ಬಿಗಳಲ್ಲಿ ಬಂದ್‌ ನಡೆಯಿತು. ಕುಣಿಗಲ್‌ ದೊಡ್ಡಕೆರೆಗೆ ನೀರು ಹರಿಸುವಂತೆ
ಒತ್ತಾಯಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಕುಣಿಗಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಮಂಗಳವಾರ ಪಾವಗಡ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಅಲ್ಲದೆ, ಆ.10ಕ್ಕೆ ಹೇಮೆ ನೀರಿಗಾಗಿ ಜೆಡಿಎಸ್‌ನಿಂದ ತಿಪಟೂರು ಬಂದ್‌ಗೆ
ಕರೆ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next