ಹಗರಿಬೊಮ್ಮನಹಳ್ಳಿ: ಕಡ್ಲಬಾಳು ಗ್ರಾ.ಪಂ.ವ್ಯಾಪ್ತಿಯ ಕೂಲಿಕಾರ್ಮಿಕರು ಬ್ಯಾಲಾಳು ಕೆರೆ ಪ್ರದೇಶದ ಹೂಳು ಎತ್ತುವ ಕಾಮಗಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಗುರವಾರ ಕಡ್ಲಬಾಳು ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದರು.
ಉದ್ಯೋಗ ಖಾತ್ರಿ ಹೋರಾಟ ಸಮಿತಿ ತಾಲೂಕು ಕಾರ್ಯದರ್ಶಿ ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿ, ಕೂಲಿ ಕಾರ್ಮಿಕರಿಗೆ ಮಗಿಮಾವಿನಹಳ್ಳಿ ಕೆರೆ ಪ್ರದೇಶ ದೂರವಾಗುವುದರಿಂದ ಹತ್ತಿರದ ಬ್ಯಾಲಾಳು ಕೆರೆ ಪ್ರದೇಶದಲ್ಲಿಯೇ ಕೆಲಸ ನೀಡಬೇಕು. 190 ಎಕರೆ ವಿಸ್ತೀರ್ಣ ಇರುವ ಬ್ಯಾಲಾಳು ಕೆರೆ ಪ್ರದೇಶದಲ್ಲಿ ಊಳು ತೆಗೆಯಲು ಸಾಕಷ್ಟು ಸ್ಥಳವಕಾಶವಿರುವಿದ್ದರೂ ಮಗಿಮಾವಿನಹಳ್ಳಿ ಕೆರೆ ಹೂಳೆತ್ತಲು ಕಳುಹಿಸುತ್ತಿರುವುದು ಕೂಲಿ ಕಾರ್ಮಿಕರಿಗೆ ವಿನಕಾರಣ ಹೊರೆ ಮಾಡಿದಂತಾಗುತ್ತಿದೆ ಎಂದು ದೂರಿದರು. ಮಗಿಮಾವಿನಹಳ್ಳಿ ಕೆರೆ ಪ್ರದೇಶದ ಮಣ್ಣು ಅತ್ಯಂತ ಗಟ್ಟಿಯಾಗಿರುವುದರಿಂದ ಬಿಸಿಲಿನಲ್ಲಿ ಹೂಳೆತ್ತುವುದು ಕೂಲಿ ಕಾರ್ಮಿಕರಿಗೆ ಅತ್ಯಂತ ತ್ರಾಸದಾಯಕವಾಗಿದೆ.
ಇದೇ ಕೆರೆಯಲ್ಲಿಯೇ ಬ್ಯಾಸಿಗಿದೇರಿ, ಬಾಚಿಗೊಂಡನಹಳ್ಳಿ ಕೂಲಿ ಕಾರ್ಮಿಕರಿಗೂ ಕೆಲಸ ನೀಡಿರುವುದರಿಂದ ಅಲ್ಲಿಯ ಕೂಲಿ ಕಾರ್ಮಿಕರು ಕೂಡ ನೋವನ್ನು ಅನುಭವಿಸುತ್ತಿದ್ದಾರೆ ಎಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಬ್ಯಾಲಾಳು ಕೆರೆ ಪ್ರದೇಶದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಕೆರೆಯ 5 ಎಕರೆ ಪ್ರದೇಶದಲ್ಲಿ ಉಚಿತವಾಗಿ ಜೆಸಿಬಿ ಯಂತ್ರ ಮೂಲಕ ಹೂಳೆತ್ತುತ್ತಿದ್ದಾರೆ. ಯೋಜನೆಯವರು ಯಂತ್ರದ ಮೂಲಕ ಮಾಡುತ್ತಿರುವುದರಿಂದ ಅವರಿಗೆ ಕೆರೆಯ ಗಟ್ಟಿ ಪ್ರದೇಶ ಹೂಳೆತ್ತಲು ತಾಲೂಕು ಆಡಳಿತ ಸೂಚಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ತಾಲೂಕಿನ ಕ್ಯಾತಯನಮರಡಿ, ಓಬಳಪುರ, ಕಡ್ಲಬಾಳು ಗ್ರಾಮದ ಕೂಲಿಕಾರರು ಒಂದು ತಿಂಗಳಿಂದ ಎನ್‌ಎಂಆರ್‌ಗಾಗಿ (ಹಾಜರಾತಿ) ಹೋರಾಟ ಮಾಡುತ್ತಾ ಬಂದಿದ್ದ ಫಲವಾಗಿ ಕಡ್ಲಬಾಳು ಗ್ರಾಪಂನವರು ಕೂಲಿ ಕಾರ್ಮಿಕರಿಗೆ ಎನ್‌ಎಂಆರ್ ನೀಡಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಾದ ಕಡ್ಲಬಾಳು ಗ್ರಾಮದ ಟಿ. ಹನುಮಂತ, ಮಂಜುನಾಥ, ಸಣ್ಣ ದುರುಗಪ್ಪ, ಕ್ಯಾತ್ಯಾಯನಮರಡಿ ತಿಂದಪ್ಪ, ನಾಗರಾಜ ದೇವಪ್ಪ, ನಿಂಗಪ್ಪ ಇತರರು ಪಾಲ್ಗೊಂಡಿದ್ದರು.