ಬೆಂಗಳೂರು /ಹುಬ್ಬಳ್ಳಿ: ಮಹದಾಯಿ ನದಿ ನೀರಿನ ಸಮಸ್ಯೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಗುರುವಾರ ರಾಜ್ಯಾದ್ಯಂತ ಬಂದ್ ಕರೆ ನೀಡಿದ್ದು ಬೆಂಗಳೂರು ಮತ್ತು ಹುಬ್ಬಳ್ಳಿ,ಗದಗ ಮತ್ತು ಬೆಳಗಾವಿಯ ಕೆಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಹೋರಾಟಗಾರರು ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸಮಾವೇಶಗೊಳ್ಳುತ್ತಿದ್ದಾರೆ. ಮೆರವಣಿಗೆಯಲ್ಲಿ ಕನ್ನಡ ಪರ ಸಂಘಟನೆ ಮತ್ತು ವಿವಿಧ ಸಂಘಟನೆಗಳ 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಕೇಂದ್ರ ಮತ್ತು ಗೋವಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾವಣೆಗೊಂಡು ಗೋವಾ ಸರ್ಕಾರಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಅಲ್ಲಲ್ಲಿ ಪ್ರಧಾನಿ ನರೇಂದ್ರ ಮೋದಿ,ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗೋವಾ ಸಿಎಂ ಮನೋಹರ್ ಪರ್ರಿಕರ್, ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ಅವರ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿಗಳನ್ನು ದಹಿಸಲಾಗಿದೆ.
ಬಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು ಕೆಲವೆಡೆ ಅಂಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ಹೊರತು ಪಡಿಸಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.