ಬೆಂಗಳೂರು : ಶಾಂತಿಯುತ ಧರಣಿಗೆ ಅವಕಾಶ ಕೊಡಬೇಕು. ಇದೇನು ಪ್ರಜಾಪ್ರಭುತ್ವವೇ ? ಪೋಲಿಸ್ ರಾಜ್ಯವೇ ? ಸರ್ವಾಧಿಕಾರವೇ?ನಮ್ಮವರೇನು ಕಾನೂನನ್ನ ಕೈಗೆತ್ತಿಕೊಂಡಿದ್ದರಾ ? ದೇಶದಲ್ಲಿ ಏನು ತುರ್ತು ಪರಿಸ್ಥಿತಿ ಇದೆಯಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರೇನು ಸ್ವಾತಂತ್ರ್ಯ ಹೋರಾಟಗಾರರೇ? ಇಡಿ ತನಿಖೆಯನ್ನ ಮಾಡಲಿ. ನನ್ನದೇನೂ ಅಭ್ಯಂತರ ಇಲ್ಲ. ಆದರೆ, ರಾಜಕೀಯ ದುರುದ್ದೇಶದಿಂದ ಮತ್ತೆ ಪ್ರಕರಣವನ್ನ ತೆರೆದಿದ್ದಾರೆ. ದ್ಚೇಷದ ರಾಜಕಾರಣ ಮಾಡುತ್ತಿದ್ದಾರೆ. ಇದನ್ನ ಪ್ರತಿಭಟಿಸಬಾರದಾ ? ಅವರಿಗೆ ಪ್ರಜಾಪ್ರಭುತ್ವ, ಸಂವಿಧಾನ, ಮೂಲಭೂತ ಹಕ್ಕು ಯಾವುದೂ ಗೊತ್ತಿಲ್ಲ. ಇವರೇನು ಓದಿಕೊಂಡಿದ್ದಾರಾ ?ಎಮರ್ಜಿಸಿಯನ್ನ ಘೋಷಿಸದೆ ಬಂಧಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ನಮ್ಮ ನಾಯಕರು ಎಐಸಿಸಿ ಕಚೇರಿಗೆ ಹೋಗುತ್ತಿರುವಾಗ ಬಂಧಿಸಿದ್ದಾರೆ. ದಿನೇಶ್ ಗುಂಡೂರಾವ್, ಡಿ.ಕೆ ಸುರೇಶ್, ಹೆಚ್.ಕೆ ಪಾಟೀಲ್ ರನ್ನ ಬಂಧಿಸಿದ್ದಾರೆ. ಈ ರೀತಿ ಬಂಧಿಸಲು ಇದೇನು ತುರ್ತು ಪರಿಸ್ಥಿತಿಯೇ ? ಪೋಲಿಸರು ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ದಾರೆ. ಇದು ಸರ್ವಾಧಿಕಾರ. ನಾನು ತೀವ್ರವಾಗಿ ಖಂಡಿಸುತ್ತೇನೆ. ಬಿಜೆಪಿಯವರಿಗೆ ಅಧಿಕಾರದ ಮದ ಇದೆ. ಅವರೇನು ಸ್ವಾತಂತ್ರ್ಯ ಹೋರಾಟಗಾರರಾ ? ಅವರು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ. ಸಂವಿಧಾನ, ಮೂಲಭೂತ ಹಕ್ಕುಗಳ ಬಗ್ಗೆ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹಲವು ನಾಯಕರನ್ನು ದೆಹಲಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ರಾಷ್ಟ್ರಪತಿ ರೇಸ್‌ನಲ್ಲಿ ಶರದ್ ಪವಾರ್ ಇಲ್ಲ: ಎನ್‌ಸಿಪಿ
ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರು ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿ, ತಮಿಳುನಾಡು ಸಿಎಂ ಏನು ಬರೆಯುತ್ತಾರೆ ಎಂಬುದು ಮುಖ್ಯವಲ್ಲ, ನೀರಿಗೆ ಯಾವುದೇ ತಕರಾರಿಲ್ಲ. ಬಿಜೆಪಿಯವರು ಇಚ್ಛಾಶಕ್ತಿಯನ್ನ ತೋರಬೇಕು. ಸಿಡಬ್ಲ್ಯುಸಿ ಮುಂದೆ ಬಂದಾಗ ಚರ್ಚಿಸಲು ಬಿಡುತ್ತಿಲ್ಲ, ಅನಗತ್ಯವಾಗಿ ವಿರೋಧ ಮಾಡುತ್ತಾರೆ. ಕೇಂದ್ರ ಸರ್ಕಾರ ಇದನ್ನ ಕ್ಲಿಯರ್ ಮಾಡಿಸಬೇಕು ಎಂದರು.