Advertisement

ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

03:17 PM Jul 27, 2018 | Team Udayavani |

ಚನ್ನಗಿರಿ: ಗ್ರಾಮದಲ್ಲಿ ರಸ್ತೆ, ಚರಂಡಿಗಳು ಅಧೋಗತಿಗೆ ತಲುಪಿವೆ. ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಸರ್ಕಾರಿ ಶಾಲೆ ಬೀಳುವಂತಿದೆ. ಸಾರ್ವಜನಿಕ ಶೌಚಾಲಯವಿಲ್ಲ. ಗ್ರಾಮದಲ್ಲಿ ಒಂದು ಲೈಬ್ರರಿ ವ್ಯವಸ್ಥೆಯಿಲ್ಲ. ಗ್ರಾಪಂ ಗೆ ಬರುವ ಯಾವೊಂದೂ ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುವುದಿಲ್ಲ. ಇಲ್ಲಿಯವರೆಗೂ ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸವಾಗಿಲ್ಲ ಎಂದು ತಾಲೂಕಿನ ಕಬ್ಬಳ ಗ್ರಾಮಸ್ಥರು ಕೇಂದ್ರದಿಂದ ಆಗಮಿಸಿದ್ದ ಗ್ರಾಮಸ್ವರಾಜ್‌ ಅಭಿಯಾನ ಅನುಷ್ಠಾನ ಅಧಿಕಾರಿ ಕಲಾಧರನ್‌ ಎದುರು ತಮ್ಮ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.

Advertisement

ಕೇಂದ್ರ ಯೋಜನೆಗಳ ಅನುಷ್ಠಾನ ಕುರಿತು ಗ್ರಾಮಸ್ಥರೊಂದಿಗೆ ಸಂವಹನ ನಡೆಸಲು ತಾಪಂ ಇಒ ಹಾಗೂ ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಎರ್ರಿಸ್ವಾಮಿ ಅವರೊಂದಿಗೆ ಆಗಮಿಸಿದ್ದ ಹಿರಿಯ ಅಧಿಕಾರಿ ಕಲಾಧರನ್‌ ಅವರೊಂದಿಗೆ ಮಾತನಾಡಿದ ಗ್ರಾಮಸ್ಥರು, ಜನ್‌ಧನ್‌ ಮತ್ತಿತರ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಆದರೆ ಬ್ಯಾಂಕ್‌ಗಳಿಗೆ ಹೋದರೆ ಸಾಲವನ್ನು ನೀಡದೆ ಅಧಿಕಾರಿಗಳು ಅಲೆದಾಡಿಸುತ್ತಾರೆ. ಹೀಗಾಗಿ ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು, ಯಾರನ್ನು ಕೇಳಬೇಕು ಎನ್ನುವುದು ಗೊತ್ತಾಗದೆ ರೈತರು, ಬಡವರು ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥ ಸಂತೋಷ್‌ ನಾಯ್ಕ ಮಾತನಾಡಿ, ಅಧಿಕಾರಿಗಳು ನಮಗೆ ಯಾವುದೇ ಮಾಹಿತಿ ನೀಡುವುದಿಲ್ಲ. ನಮ್ಮ ಗ್ರಾಮಕ್ಕೆ ನೀವು ಅಧಿಕಾರಿಗಳು ಬರುವ ಮಾಹಿತಿಯನ್ನೂ ನೀಡಿಲ್ಲ. ಅಧಿಕಾರಿಗಳು ಕೆಲವರ ಜೊತೆಯಲ್ಲಿ ಶಾಮೀಲಾಗಿದ್ದು, ಉಳ್ಳವರು ಕೆಲಸವನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕೇಂದ್ರದ ಗ್ರಾಮಸ್ವರಾಜ್‌, ಜನ್‌ಧನ್‌, ಫಸಲ್‌ಭೀಮಾ ಯೋಜನೆ ಸೇರಿದಂತೆ ಯಾವೊಂದು ಯೋಜನೆ ಲಾಭ ಜನತೆಗೆ ತಲುಪಿಲ್ಲ, ಕೆಲಸವಾಗಿಲ್ಲ ಎಂಬ ಗ್ರಾಮಸ್ಥರ ಆಕ್ರೋಶದ ಮಾತು ಕೇಳಿ ಅಧಿಕಾರಿ ಕಲಾಧರನ್‌ ಒಂದೂ ಮಾತನಾಡದೇ ತೆರಳಿದರು. ಪ್ರತಿಭಟನೆಯಲ್ಲಿ ಧನುಬಾಯಿ, ನಿಕೀಲ್‌ ನಾಯ್ಕ, ಹನುಮಂತ ನಾಯ್ಕ, ಭರತ್‌, ಅಣ್ಣಯ್ಯ, ಜಿತೇಂದ್ರ ಪ್ರಕಾಶ್‌, ಲಂಕೇಶ್‌ ಇದ್ದರು.

ತಾಪಂ ಇಒಗೆ ಘೇರಾವ್‌ ಹಾಕಿದ ಗ್ರಾಮಸ್ಥರು
ಐಎಎಸ್‌ ಅಧಿಕಾರಿಯೊಂದಿಗೆ ಆಗಮಿಸಿದ್ದ ತಾಪಂ ಇಒ ಪ್ರಕಾಶ್‌ ಅವರನ್ನು ಸುತ್ತುವರೆದ ಗ್ರಾಮಸ್ಥರು, ಉದ್ಯೋಗ ಖಾತ್ರಿಯಲ್ಲಿ ಎಷ್ಟು ಜನರಿಗೆ ಕೆಲಸ ಕೊಟ್ಟಿದ್ದೀರಿ ತೋರಿಸಿ. ನಮ್ಮ ಸಮಸ್ಯೆಗಳನ್ನು ಹೇಳುವ ಹಕ್ಕು ನಮಗಿಲ್ಲವೇ?ನಮ್ಮ ಹಕ್ಕು ಕೇಳಿದರೆ ಗಲಾಟೆ ಮಾಡುತ್ತೀರಿ ಎಂದು ಆರೋಪ ಮಾಡುತ್ತೀರಾ. ಮೊದಲು ಗ್ರಾಮದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ನೀಡಿ. ಇಲ್ಲವಾದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಗ್ರಾಮಸ್ಥರು ಗ್ರಾಪಂ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಪಿಡಿಒ ಗ್ರಾಮಸ್ಥರ ಮನವೊಲಿಸಿದ ನಂತರ ಪ್ರತಿಭಟನೆ ವಾಪಸ್‌ ಪಡೆದರು. ಆಗ ಇಒ ಗ್ರಾಮದಿಂದ ಮರಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next