ಯಾದಗಿರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಜು.11ರಂದು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮೊಗ್ಧಂಪೂರ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲೆಯ ಎಲ್ಲ ಸಮುದಾಯದಗಳ ಸಂಘಟನೆ ಜಿಲ್ಲಾ-ತಾಲೂಕು ಅಧ್ಯಕ್ಷರು, ವಾಲ್ಮೀಕಿ ನಾಯಕ, ಮಾದಿಗ, ಛಲವಾದಿ, ಭೋವಿ, ಲಂಬಾಣಿ, ಮೇದಾರ, ಕೊರಚ, ಕೊರಮ, ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ, ಅತಿ ಸೂಕ್ಷ್ಮಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಬಿಎಸ್ಪಿ ಮುಖಂಡ ವಾಸು ಮಾತನಾಡಿ, ನ್ಯಾ. ನಾಗಮೋಹನದಾಸ ಸರ್ಕಾರಕ್ಕೆ ವರದಿ ಸಲ್ಲಿಸಿ ಎರಡು ವರ್ಷಗಳಾದರೂ ಸರ್ಕಾರ ಇಲ್ಲಿವರೆಗೆ ಮೀಸಲಾತಿ ಹೆಚ್ಚಿಸದೇ ವಿಳಂಬ ಮಾಡುತ್ತಿದೆ. ಶೋಷಿತ ಸಮುದಾಯಗಳ ತಾಲೂಕು ಮುಖಂಡರು ಆಯಾ ತಾಲೂಕುಗಳಲ್ಲಿ ಸಭೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಐತಿಹಾಸಿಕ ನಿರ್ಣ ಯಕ್ಕೆ ಮುಂದಾಗಬೇಕು ಎಂದರು.
ವಾಲ್ಮೀಕಿ ಸಮಾಜದ ಮುಖಂಡ ಗೌಡಪ್ಪಗೌಡ ಅಲ್ದಾಳ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಕಳೆದ 143 ದಿನಗಳಿಂದ ಎಸ್‌ಟಿ ಜನಾಂಗಕ್ಕೆ ಶೇ.3ರಿಂದ 7.5 ಹೆಚ್ಚಳ ಮತ್ತು ಎಸ್‌ಸಿ ಜನಾಂಗಕ್ಕೆ ಶೇ.15ರಿಂದ ಶೇ.17ಕ್ಕೆ ಹೆಚ್ಚಳ ಮಾಡುವಂತೆ ಅಹೋರಾತ್ರಿ ಧರಣಿ ಕುಳಿತು ನ್ಯಾಯಬದ್ಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ, ಶೋಷಿತ ಸಮುದಾಯಗಳ ಮುಖಂಡರ ತೀರ್ಮಾನದ ಮೇರೆಗೆ ಜು.11ರಂದು ಶೋಷಿತ ಸಮುದಾಯಗಳ ಸ್ವಾಮೀಜಿಗಳ ಕರೆ ಮೇರೆಗೆ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಮಾನಸಿಂಗ್ ಚವ್ಹಾಣ, ಟಿ.ಎನ್. ಭೀಮುನಾಯಕ, ಬಿ.ಎಂ. ಪೂಜಾರಿ, ಅಶೋಕ ಗಾಜರಕೋಟ, ಪರಶುರಾಮ ಚವ್ಹಾಣ, ರಾಮು ನಾಯಕ, ಮರೆಪ್ಪ ಪ್ಯಾಟಿ, ತಿಮ್ಮಪ್ಪ ನಾಯಕ, ಹಣಮಂತ ಮೇದಾರ, ಬಸವರಾಜ ಮುದ್ನಾಳ, ಮಾರುತಿ, ಎ.ಪಿ. ಭಜಂತ್ರಿ, ಭೀಮರಾಯ ಠಾಣಗುಂದಿ, ರಾಘವೇಂದ್ರ ನಾಯಕ, ಅಬ್ದುಲ್‌ಕರಿಂ, ಹಣಮಂತ ನಾಯಕ, ಚಂದ್ರಕಾಂತ ಹತ್ತಿಕುಣಿ, ದೊಡ್ಡಯ್ಯ ನಾಯಕ, ಶರಣಪ್ಪ ಜಾಕನಳ್ಳಿ, ಮೋನಪ್ಪ ಹಳಿಗೇರಾ ಇತರರು ಇದ್ದರು.