ಬೈಲಹೊಂಗಲ: ಪಟ್ಟಣದ ಮಿನಿ ವಿಧಾನ ಸೌಧದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯಲ್ಲಿನ ಭ್ರಷ್ಟಾಚಾರ, ಅಧಿಕಾರಿಯ ದುರ್ವರ್ತನೆ ಖಂಡಿಸಿ ನಾನಾ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಮಿನಿ ವಿಧಾನ ಸೌಧದ ಎದುರು ಪ್ರತಿಭಟಿಸಲಾಯಿತು.
ತಹಶೀಲ್ದಾರು ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು. ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ಮಾತನಾಡಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಾರ್ವಜನಿಕರ ಜೊತೆ ಸರಿಯಾದ ಸ್ಪಂದನೆ ಮಾಡದೆ ದುರ್ವರ್ತನೆ ತೋರುತ್ತಿದ್ದಾರೆ. ತಮ್ಮ ಕೆಲಸ ಕಾರ್ಯಗಳಿಗಾಗಿ ಮಿನಿ ವಿಧಾನ ಸೌಧದ ಕಚೇರಿಗೆ ಅಲೆದಾಡುವ ಬಡ ಜನತೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಭ್ರಷ್ಟಾಚಾರ ಮಿತಿ ಮೀರಿದ್ದು ಈ ಬಗ್ಗೆ ಅಧಿಕಾರಿಯ ಗಮನಕ್ಕೆ ತಂದರೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲವೆಂದು ಆರೋಪಿಸಿದರು.
ತಹಶೀಲ್ದಾರರು ಮಿನಿ ವಿಧಾನ ಸೌಧದಲ್ಲಿರುವ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸಾರ್ವಜನಿಕರ ಜೊತೆ ಸರಿಯಾಗಿ ಸ್ಪಂದಿಸುವಂತೆ, ಭ್ರಷ್ಟಾಚಾರ ಕೈ ಬಿಡುವಂತೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಎಲ್ಲ ಕಚೇರಿಗಳಲ್ಲಿ ಅಟೋ ಚಾಲಕರನ್ನು ಗೌರವದಿಂದ ಕಾಣಬೇಕು. ಒಂದು ವೇಳೆ ಅಟೋ ಚಾಲಕರಿಗೆ ಅನ್ಯಾಯವಾದರೆ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಅಟೋ ಚಾಲಕರ ಸಂಘದ ಉಪಾಧ್ಯಕ್ಷ ಜೀವನ ಉತ್ಕುರಿ, ಸಿದ್ಧಾರೂಡ ಹೊಂಡಪ್ಪನ್ನವರ, ಶಶಿಕುಮಾರ ಪಾಟೀಲ, ನಾಗಪ್ಪ ಸಂಗೊಳ್ಳಿ, ಪ್ರವೀಣ ಕುಂಬಾರ, ರುದ್ರಪ್ಪ ಹಾಲಿಮರಡಿ, ಗಜಾನಾನ ಕಾಫೆ, ಮಹ್ಮದಹುಸೇನ ಲಿಂಗ್ರೆ, ಲಕ್ಷ್ಮಣ ಜಮನಾಳ, ಅಬ್ದುಲ್ ದುಬೆ„ವಾಲಾ, ಚಂದ್ರಿಕಾ ಕಳಂಕರ, ಉಳವಪ್ಪ ಅಂಗಡಿ, ಶಿವಾನಂದ ಕುಲಕರ್ಣಿ, ಮಾರುತಿ ಕೊಂಡುರ, ಗೋಪಿ ಗೋಸಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಿನಿ ವಿಧಾನ ಸೌಧದಲ್ಲಿರುವ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಾರ್ವಜನಿಕರ ಜೊತೆ ಸರಿಯಾಗಿ ಸ್ಪಂದಿಸುವಂತೆ ಸೂಚನೆ ನೀಡಲಾಗುವುದು. ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸುತ್ತೇವೆ. ಇದೇ ರೀತಿ ಮುಂದುವರೆದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇನೆ.
-ಬಸವರಾಜ ನಾಗರಾಳ, ತಹಶೀಲ್ದಾರರು, ಬೈಲಹೊಂಗಲ