Advertisement
ಗ್ರಾಮೀಣ ಅಂಚೆ ನೌಕರರ ಬೇಡಿಕೆ ಈಡೇರಿಸುವ ಕುರಿತು ಕೇಂದ್ರದ ನಾಯಕ ರೊಂದಿಗೆ ಮಾತುಕತೆ ನಡೆದಿದೆ. ಆದರೂ ಬೇಡಿಕೆ ಈಡೇರಿಸುವ ಕುರಿತು ಲಿಖಿತ ಭರವಸೆ ದೊರೆಯುವ ತನಕ ನಾವು ಪ್ರತಿಭಟನೆಯನ್ನು ಹಿಂದೆ ಪಡೆಯುವುದಿಲ್ಲ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಬಂಟ್ವಾಳ ವಿಭಾಗದ ಕಾರ್ಯದರ್ಶಿ ಗಣೇಶ್ ಹೇಳಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ 10 ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಆದರೆ ಲಿಖಿತ ಭರವಸೆಗಳು ದೊರೆತಿಲ್ಲ. ಶುಕ್ರವಾರ ‘ದೆಹಲಿ ಚಲೋ’ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗಿದ್ದು, ಸಾವಿರಾರು ನೌಕರರು ಹೊಸದಿಲ್ಲಿಗೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರಕಾರದಿಂದ ಲಿಖಿತ ಭರವಸೆ ದೊರೆಯದಿದ್ದಲ್ಲಿ ಇಲಾಖೆ ನೌಕರರೂ ಜೂ. 4ರಿಂದ ನಮ್ಮ ಜೊತೆ ಕೈಜೋಡಿಸಲಿದ್ದು, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆಯು ಹಣಕಾಸಿನ ಪ್ರಮುಖ ವ್ಯವಹಾರ ಕೇಂದ್ರವಾಗಿದೆ. ಹತ್ತು ದಿನಗಳಿಂದ ಪತ್ರಗಳು ಬಟವಾಡೆ ಆಗದೇ ಕಚೇರಿಯಲ್ಲಿಯೇ ಉಳಿದಿವೆ. ಶಾಲೆ, ಕಾಲೇಜುಗಳು ಆರಂಭಗೊಂಡಿದ್ದು, ಅಗತ್ಯ ದಾಖಲೆ ಪತ್ರಗಳು ಬಟವಾಡೆ ಆಗದೆ ಕಚೇರಿಯಲ್ಲಿಯೇ ರಾಶಿ ಬಿದ್ದಿವೆ. ಸಾರ್ವಜನಿಕರಿಗೆ ಇಷ್ಟೊಂದು ತೊಂದರೆ ಉಂಟಾಗುತ್ತಿದ್ದರೂ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.