ಹೊಸದಿಲ್ಲಿ:ಇ ಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ತಿಹಾರ್ ಜೈಲಿನ ಹೊರಗೆ ಔಷಧ ಗಳನ್ನು ಹಿಡಿದು ಭಾನುವಾರ ಪ್ರತಿಭಟನೆಗಿಳಿದಿದೆ.
ಚುನಾಯಿತ ಸಿಎಂ ಅರವಿಂದ್ ಕೇಜ್ರಿವಾಲ್ ಮಧುಮೇಹ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಎಎಪಿಯ ಸೌರಭ್ ಭಾರದ್ವಾಜ್ ಆರೋಪ ಮಾಡಿದ್ದಾರೆ.
ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಅವರು, “ಅರವಿಂದ್ ಕೇಜ್ರಿವಾಲ್ ಅವರು ಕಳೆದ 20 ದಿನಗಳಿಂದ ಜೈಲಿನಲ್ಲಿದ್ದಾರೆ. ಅವರು 30 ವರ್ಷಗಳಿಂದ ಮಧುಮೇಹಿ ಯಾಗಿದ್ದು ಅವರ ಸಕ್ಕರೆ ಮಟ್ಟ 300 ದಾಟಿದೆ. ನೀವು ಜಗತ್ತಿನ ಯಾವುದೇ ವೈದ್ಯರನ್ನು ಕೇಳಿದರೂ 300 ಕ್ಕಿಂತ ಹೆಚ್ಚಿರುವ ಸಕ್ಕರೆಯ ಮಟ್ಟವು ಇನ್ಸುಲಿನ್ ಇಲ್ಲದೆ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಹೇಳಿತ್ತಾರೆ. ತಿಹಾರ್ ಜೈಲಿನ ಆಡಳಿತವು ಇನ್ಸುಲಿನ್ ನೀಡಲು ನಿರಾಕರಿಸಿದೆ. 300 ಕ್ಕಿಂತ ಹೆಚ್ಚು ಸಕ್ಕರೆ ಮಟ್ಟ ಹೊಂದಿದ್ದರೂ ಇನ್ಸುಲಿನ್ ನಿರಾಕರಿಸುತ್ತಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲೂ ಇಂತಹ ಕ್ರೌರ್ಯವು ನಡೆದಿಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ತಿಹಾರ್ ಜೈಲಲ್ಲಿ ಕೇಜ್ರಿವಾಲ್‌ರನ್ನು ನಿಧಾವಾಗಿ ಕೊಲ್ಲಲು ಸಂಚು ನಡೆಸಲಾಗಿದೆ ಎಂದು ಆಪ್ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದರು.
ಬಂಧನಕ್ಕೂ ಹಲವು ತಿಂಗಳುಗಳ ಮೊದಲಿನಿಂದಲೇ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇನ್ಸುಲಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ದೇಹದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪರ್ಯಾಯ ಔಷಧ ಮೆಟ್‌ಫೋರ್ಮಿನ್ ಮಾತ್ರೆ ಸೇವಿಸುತ್ತಿದ್ದಾರೆ. ಆರೋಗ್ಯ ತಪಾಸಣೆಯ ವೇಳೆ ಸ್ವತಃ ಕೇಜ್ರಿವಾಲ್ ಅವರೇ ಈ ಮಾಹಿತಿ ನೀಡಿದ್ದಾರೆ ಎಂದು ತಿಹಾರ್ ಜೈಲು ಆಡಳಿತ ತಿಳಿಸಿದೆ. ಅಲ್ಲದೆ ಕೇಜ್ರಿವಾಲರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿಲ್ಲ ಹಾಗೂ ಅಗತ್ಯಬಿದ್ದರೆ ಇನ್ಸುಲಿನ್ ಒದಗಿಸಲಾಗುವುದು ಎಂದಿದೆ. ಈ ವರದಿ ಲೆಫ್ಟಿನೆಂಟ್ ಗವರ್ನರ್ ಕೈಸೇರಿದೆ.