ಗುಳೇದಗುಡ್ಡ: ನೇಕಾರ ಫಲಾನುಭವಿಗಳ ಸಮಸ್ಯೆ ಬಗೆಹರಿಸಿ ನಿವೇಶನ ದೊರೆಯುವಂತೆ ಮಾಡಲು ಪಟ್ಟಣದ ಸರ್ವಪಕ್ಷಗಳ ಮುಖಂಡರು ತೀರ್ಮಾನಿಸಿದ್ದು, ಉತ್ತಮ ಬೆಳವಣಿಗೆ. ನೇಕಾರರು ಸಹಕಾರ ನೀಡಿ ಧರಣಿ ಮೊಟಕುಗೊಳಿಸಬೇಕು ಎಂದು ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕೈ ಮಗ್ಗ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ನೇಕಾರರಲ್ಲಿ ಮನವಿ ಮಾಡಿದರು.
ಪಟ್ಟಣದಲ್ಲಿ ನೇಕಾರ ಫಲಾನುಭವಿಗಳು ನಡೆಸಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಮಸ್ಯೆ ಪರಿಹಾರಕ್ಕೆ ಧರಣಿಯೊಂದೆ ಮಾರ್ಗವಲ್ಲ. ಪಟ್ಟಣದ ಎಲ್ಲ ಪಕ್ಷಗಳ ಮುಖಂಡರ, ಗಣ್ಯರ ತೀರ್ಮಾನದಂತೆ ನೇಕಾರರಿಗೆ ನಿವೇಶನ ಹಂಚಿಕೆಗೆ ಸಹಕರಿಸಬೇಕು. ಸಮಸ್ಯೆ ಆಗಿರಬಹುದು. ಆದರೆ ಸಮಸ್ಯೆಗೆ ಧರಣಿ ಮಾಡುವುದೇ ದೊಡ್ಡ ಪರಿಹಾರವಲ್ಲ. ಅದನ್ನು ಬಗೆಹರಿಸಿಕೊಂಡು ನೇಕಾರರಿಗೆ ಮನೆ ಸಿಗುವಂತೆ ಮಾಡುವುದು ಪ್ರತಿಯೊಬ್ಬ ಪ್ರಮುಖರ ಜವಾಬ್ದಾರಿಯಾಗಿದೆ ಎಂದು ಮನವರಿಕೆ ಮಾಡಿದರು.
ಗುಳೇದಗುಡ್ಡ ನೇಕಾರರ ಊರು. ನೇಕಾರರು ಈಗ ಧರಣಿ ಮಾಡುವುದು ಔಚಿತ್ಯವಲ್ಲ. ಇಷ್ಟು ದಿನ ಧರಣಿ ಮಾಡಿದ್ದು ಸಾಕು. ಈಗ ಏನಿದ್ದರೂ ನೇಕಾರರಿಗೆ ನಿವೇಶನ ದೊರೆಯುವ ಮಾರ್ಗದಲ್ಲಿ ಸಾಗಬೇಕು. ಆ ನಿಟ್ಟಿನಲ್ಲಿ ನಾನು ಕೂಡಾ ಮೂರು ಪಕ್ಷಗಳ ಮುಖಂಡರೊಂದಿಗೆ ಮಾತನಾಡಿದ್ದೇನೆ. ಮೂರು ಪಕ್ಷಗಳ ನಿರ್ಧಾರ ದಂತೆ ಧರಣಿ ನಿರತ ನೇಕಾರರು ನಡೆದುಕೊಳ್ಳಬೇಕು. ನಿವೇಶನ ಹಂಚಿಕೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಜವಳಿ ಮೂಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋ ತಿಪ್ಪೇಶ, ಮುಖಂಡ ವಿಜಯಕುಮಾರ ಭಾಪ್ರಿ ಇದ್ದರು.
ಮೂರು ದಿನ ಧರಣಿ ಮುಂದೂಡಿಕೆ
ಗುಳೇದಗುಡ್ಡ: ಪಟ್ಟಣದಲ್ಲಿ ನೇಕಾರರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ, ಹಿರಿಯ ನಾಗರಿಕರ ಪ್ರಜಾ ಜಾಗೃತ ವೇದಿಕೆ ಹಾಗೂ ನೇಕಾರರು ನಡೆಸುತ್ತಿದ್ದ ಧರಣಿ ಮೂರು ದಿನ ಮುಂದೂಡಲಾಗಿದೆ. ಈರಮ್ಮ ಗಡಾದ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಎಂಟು ದಿನಗಳಿಂದ ನಿವೇಶನ ಹಂಚಿಕೆಗೆ ನೇಕಾರರು ಸತ್ಯಾಗ್ರಹ ಮಾಡುತ್ತಿದ್ದು, ಸರ್ವ ಪಕ್ಷಗಳ ಮುಖಂಡರು ನಿವೇಶನ ಹಂಚಿಕೆಗೆ ತೀರ್ಮಾನ ಕೈಗೊಂಡು ನಮಗೆ ತಿಳಿಸಿದ್ದು, ನಾವು 106
ಜನ ನೇಕಾರೆಲ್ಲರನ್ನು ಸೇರಿಸಿ, ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಮ್ಮ ತೀರ್ಮಾನಕ್ಕೆ ಒಪ್ಪದಿದ್ದರೇ ನಾವು ಸತ್ಯಾಗ್ರಹವನ್ನು
ಮತ್ತೆ ಮುಂದುವರಿಸುತ್ತೇವೆ ಎಂದು ಹೇಳಿದರು.