ಚನ್ನರಾಯಪಟ್ಟಣ: ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ 18 ತಿಂಗಳಲ್ಲಿ ಉನ್ನತೀಕರಣ ಮಾಡುವುದಾಗಿ ಖಾಸಗಿಯವರಿಗೆ ಗುತ್ತಿಗೆ ನೀಡಿರುವುದಾಗಿ ಹೇಳಿದ ಆಡಳಿತ ಮಂಡಳಿ 13 ವರ್ಷವಾದರೂ ಕಾರ್ಖಾನೆ ಉನ್ನತೀಕರಣ ಮಾಡಿ ಪ್ರಾರಂಭಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆರೋಪಿಸಿದರು.
ತಾಲೂಕಿನ ಶ್ರೀನಿವಾಸಪುರ ಬಳಿ ಇರುವ ಕಾರ್ಖಾನೆ ಮುಂಭಾಗ ಕಾಂಗ್ರೆಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, 13 ವರ್ಷದಿಂದ ಕಬ್ಬು ಬೆಳೆಗಾರರಿಗೆ 200 ಕೋಟಿ ಹಣ ನಷ್ಟವಾಗಿದೆ. ಆದರೆ ಕಾರ್ಖಾನೆಯನ್ನುಚಾಮುಂಡೇಶ್ವರಿ ಷುಗರ್ ಸಂಸ್ಥೆಗೆ ನೀಡಿ ಹಣ ಮಾಡಿರುವುದಲ್ಲದೆ ರೈತರಿಗೆ ದ್ರೋಹ ಮಾಡಿದ್ದಾರೆ ಎಂದರು.
ಶಾಸಕ ಬಾಲಕೃಷ್ಣ ಎರಡು ವರ್ಷದಿಂದ ಹತ್ತಕ್ಕೂ ಹೆಚ್ಚು ಬಾರಿ ದಿನಾಂಕ ನೀಡಿದ್ದಾರೆ, ಕಾಂಗ್ರೆಸ್ ಪ್ರತಿಭಟನೆ ಮಾಡುವುದನ್ನು ಅರಿತುಕಾರ್ಖಾನೆ ಅಧಿಕಾರಿಗಳ ಮೂಲಕ ಈ ತಿಂಗಳ30 ರಂದು ಪ್ರಾರಂಭಿಸುವುದಾಗಿ ಪತ್ರ ಬರೆದು ಕಳುಹಿಸಿದ್ದಾರೆ, ಶೀಘ್ರದಲ್ಲಿ ಹಾಸನಕ್ಕೆ ಪಾದಯಾತ್ರೆ ಮಾಡುವುದಲ್ಲದೆ, ವಿಧಾನಸೌಧ ಚಲೋ ಹಮ್ಮಿ ಕೊಳ್ಳಲಾಗುವುದು, ಜೊತೆಗೆಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ನೀಡಬೇಕಾಗಿರುವ ಹಣದ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಹೇಳಿದರು.
ಬಡ್ಡಿ ಕೊಡುವವರು ಯಾರು: ಈಗಾಗಲೇ 26 ಕೋಟಿ ಕರಾರು ಹಣ ಬಾಕಿ ಉಳಿಸಿಕೊಂಡಿದ್ದಾರೆ ಇದನ್ನು ಬ್ಯಾಂಕಿಗೆ ಠೇವಣಿ ಮಾಡಿದರೆ ವಾರ್ಷಿಕ 4 ಕೋಟಿ ಬಡ್ಡಿ ಬರುತ್ತಿತ್ತು ಇದನ್ನು ನೀಡುವವರು ಯಾರು? ಒಂದು ವೇಳೆ ಹಣ ಪಡೆಯದೆ ಶಾಸಕರು ವಾರ್ಷಿಕ ಕೋಟ್ಯಂತರ ರೂ. ಹಣ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಿಕ್ ಬ್ಯಾಗ್ ಪಡೆದ ಶಾಸಕ: ರೈತ ಮುಖಂಡ ಶ್ರೀಕಂಠ ಮಾತನಾಡಿ, ಕ್ಷೇತ್ರದ ಶಾಸಕ ಬಾಲಕೃಷ್ಣ ಚಾಮುಂಡೇಶ್ವರಿ ಸಂಸ್ಥೆಯಿಂದ ಕಿಕ್ ಬ್ಯಾಗ್ ಪಡೆದಿದ್ದಾರೆ, ಅವರಿಗೆ ರೈತರ ಕಾಳಜಿ ಮುಖ್ಯವಲ್ಲ ಹಣ ಮಾಡುವುದು ಮುಖ್ಯವಾಗಿದೆ, ರೈತ ಸಂಘದವರು ಧರಣಿ ಮಾಡಿದರೆ ಮಾರನೇ ದಿವಸ ಅಥವಾ ಧರಣಿ ಹಿಂದಿನ ದಿವಸ ಕಾರ್ಖಾನೆ ಭೇಟಿ ನೀಡಿ ಹಣ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹಳೆ ವಸ್ತುಗಳಿಂದ ಕಾರ್ಖಾನೆ ಉನ್ನತೀಕರಣ: ಚಾಮುಂಡೇಶ್ವರಿ ಷುಗರ್ ಅವರು ಈಗಾಗಲೆ ನಾಲ್ಕು ಕಾರ್ಖಾನೆ ಹೊಂದಿದ್ದು ಇಲ್ಲಿನ ಕಾರ್ಖಾನೆ ಉನ್ನತೀಕರಣಕ್ಕೆಂದು ಹೊಸ ಸಾಮಗ್ರಿ ತರಿಸಿ ಅದನ್ನು ಬೇರೆ ಕಾರ್ಖಾನೆಗೆ ಕಳುಹಿಸಿ ಅಲ್ಲಿನ ಹಳೆಯ ಯಂತ್ರಗಳನ್ನು ಇಲ್ಲಿಗೆ ಜೋಡಣೆ ಮಾಡುತ್ತಿದ್ದಾರೆ, ಹೊಸ ವಸ್ತುಗಳನ್ನು ಅಡಳವಡಿಸಿದ್ದರೆ ಯಾಕೆ ಬೈಲರ್ ಸಿಡಿದು ಹೋಗುತ್ತಿತ್ತು ಎಂದು ಪ್ರಶ್ನಿಸಿದರು.ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿಪಂ ಸದಸ್ಯ ಶ್ರೇಯಸ್ ಎಂ. ಪಟೇಲ್, ತಾಪಂ ಸದಸ್ಯರಾದ ರತ್ನಮ್ಮ, ರಾಮಕೃಷ್ಣೇಗೌಡ, ಪ್ರಮೀಳಾ, ಮಂಜುನಾಥ, ಗಿರೀಶ್, ಜಿಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ, ಕಿನಾಸ್ ಕಾಂಗ್ರೆಸ್ ಅಧ್ಯಕ್ಷ ಶಿವಪ್ರಸಾದ್, ಕಾರ್ಖಾನೆ ನಿರ್ದೇಶಕರಾದ ರವೀಂದ್ರ, ನಾರಾಯಣ, ಮಾಜಿ ನಿರ್ದೇಶಕ ಶಿವರಾಂ, ಎ.ಬಿ.ನಂಜುಂಡೇಗೌಡ ಇದ್ದರು.