ಮೂಡಬಿದರೆ: ಹಟ್ಟಿಗೆ ನುಗ್ಗಿ ದನಗಳನ್ನು ಕಾರಿಗೆ ತುಂಬಿಸಿ ಒಯ್ಯಲಾಗುತ್ತಿದೆ, ಮನೆ ಮಂದಿಗೆ ತಲವಾರು ಝಳಪಿಸಿ ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷ್ಯ ತೋರಿ ಕಳ್ಳರು ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಹಾಗೂ ಮಾಹಿತಿದಾರರಿಗೆ ರಕ್ಷಣೆ ನೀಡಿಲ್ಲ ಎಂದು ಆರೋಪಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ಮೂಡಬಿದಿರೆ ಠಾಣೆಗೆ ಬುಧವಾರ ಮುತ್ತಿಗೆ ಹಾಕಿದರು. ದನಗಳ್ಳರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷರು “ಇದೊಂದು ಕೊಲೆ ಯತ್ನ’ ಎಂದು ದೂರು ಸಲ್ಲಿಸಿದ್ದಾರೆ.
ಬುಧವಾರ ಪಡುಮಾರ್ನಾಡು ಸಮೀಪದ ನಿವಾಸಿ ರಾಜೇಶ್ ಅವರ ಹಟ್ಟಿಯಲ್ಲಿದ್ದ ದನವನ್ನು ಮುಂಜಾನೆ 5 ಗಂಟೆ ಸುಮಾರಿಗೆ ರಿಟ್ಸ್ ಕಾರಿನಲ್ಲಿ ಬಂದ ನಾಲ್ವರ ತಂಡ ದನವನ್ನು ಕದ್ದು ಕಾರಿಗೆ ತುಂಬಿಸುವ ವೇಳೆ ನಾಯಿಗಳು ಬೊಗಳಿದ್ದು, ಈ ವೇಳೆ ಪಕ್ಕದ ಮನೆಯಲ್ಲಿದ್ದ ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಸುವರ್ಣ ಎಚ್ಚರಗೊಂಡು ದನಗಳ್ಳರತ್ತ ಧಾವಿಸಿದ್ದು, ಖದೀಮರು ತಲವಾರು ತೋರಿಸಿ ಪರಾರಿಯಾಗಿದ್ದಾರೆ.
ಕೂಡಲೇ ಶ್ರೀನಾಥ್, ಯಶವಂತ್ ಸೇರಿ ದನ ಕಳ್ಳರ ಕಾರನ್ನು ಬೆನ್ನಟ್ಟಿದ್ದು, ಕಾರು ಬೆಳುವಾಯಿ ಮಾರ್ಗವಾಗಿ ಮೂಡಬಿದಿರೆಯತ್ತ ತಿರುಗಿದೆ. ಆ ವೇಳೆಯಲ್ಲಿ ಶ್ರೀನಾಥ್ ಮೂಡಬಿದಿರೆ ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಅಲಂಗಾರು ಕಟ್ಟೆ ಬಳಿ ನಾಕಾಬಂದಿ ಹಾಕಿರುವುದಾಗಿ ತಿಳಿಸಿದ್ದಾರೆ. ಈ ಮಾತನ್ನು ನಂಬಿ ಶ್ರೀನಾಥ್ ಅಲಂಗಾರು ತಲುಪಿದಾಗ ಅಲ್ಲಿ ಯಾವ ಪೋಲಿಸರೂ ಕಾಣಿಸಲಿಲ್ಲ. ಕೂಡಲೇ ಶ್ರೀನಾಥ್ ಅಲ್ಲಿಂದ ಮತ್ತೂಮ್ಮೆ ಕರೆ ಮಾಡಿದಾಗ ಪೊಲೀಸರು ರಿಂಗ್‌ರೋಡ್ ಬಳಿ ಇರುವುದಾಗಿ ಸುಳ್ಳು ಹೇಳಿದ್ದಾರೆ ಎನ್ನಲಾಗಿದೆ.
ಶ್ರೀನಾಥ್ ತಮ್ಮನ್ನು ಬೆನ್ನಟ್ಟಿ ಬರುತ್ತಿರುವುದನ್ನು ಗಮನಿಸಿದ ಕಳ್ಳರು ತಮ್ಮ ಕಾರನ್ನು ವೇಗವಾಗಿ ಅಡ್ಡಾದಿಡ್ಡಿ ಚಲಾಯಿಸಿದ್ದು, ಗಾಂಧಿನಗರ ಸಮೀಪ ಕಾರು ಚರಂಡಿಗೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಓರ್ವ ತಲವಾರು ಬೀಸಿ, ಕಬ್ಬಿಣದ ರಾಡ್ ಹಾಗೂ ಮಾಝಾ ಪಾನೀಯದ ಬಾಟಲಿಯನ್ನು ಶ್ರೀನಾಥ್ ಕಾರಿಗೆ ಎಸೆದಿದ್ದಾನೆ. ಘಟನೆಯಲ್ಲಿ ಶ್ರೀನಾಥ್ ಕಾರಿನ ಗಾಜು ಪುಡಿಯಾಗಿದ್ದು, ತೋಡಾರು ತನಕ ಕಳ್ಳರನ್ನು ಬೆನ್ನಟ್ಟಿ ಶ್ರೀನಾಥ್ ವಾಪಸ್ ಬಂದರು.
ಸುದ್ದಿ ತಿಳಿದ ಸಂಘಟನೆಯ ಮಂದಿ ತಂಡೋಪತಂಡವಾಗಿ ಮೂಡಬಿದಿರೆಯತ್ತ ಜಮಾಯಿಸಿದರು. ಮಾಹಿತಿ ನೀಡಿದರೂ ಆರೋಪಿಗಳನ್ನು ಬಂಧಿಸದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಗಳ ಬಂಧನ ಆಗುವವರೆಗೆ ಧರಣಿ ನಡೆಸುವುದಾಗಿ ಪಟ್ಟು ಹಿಡಿದರು.
ಎಸಿಪಿ ಆಗಮನ
ಪಣಂಬೂರು ಎಸಿಪಿ ರಾಜೇಂದ್ರ ಡಿ. ಎಸ್. ಆಗಮಿಸಿ ದರಣಿ ನಿರತರನ್ನು ಸಮಾಧಾನಪಡಿಸಲೆತ್ನಿಸಿದರು. ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಸಂಘಟನೆ ಕಾರ್ಯಕರ್ತರು ಎರಡು ದಿನಗಳ ಗಡುವು ನೀಡಿ ಧರಣಿಯನ್ನು ಹಿಂಪಡೆದಿದ್ದಾರೆ.