Advertisement

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಗ್ರಾಪಂ ಎದುರು ಪ್ರತಿಭಟನೆ

12:40 PM Feb 22, 2021 | Team Udayavani |

ಕನಕಪುರ: ಮೂಲ ಸೌಕರ್ಯ ನೀಡದೇ ಗ್ರಾಪಂ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಟಿ.ಹೊಸಹಳ್ಳಿಯ ಮಾದಿಗ ಸಮುದಾಯದ ಜನರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಟಿ.ಹೊಸಹಳ್ಳಿ ಗ್ರಾಪಂ ಕಚೇರಿ ಮುಂದೆ ಜಾಮಾವಣೆಗೊಂಡ ಗ್ರಾಮದ ಮಹಿಳೆಯರು, ಮಕ್ಕಳು, ಯುವಕರು ಗ್ರಾಪಂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಮೇಲ್ಜಾತಿ ಸಮುದಾಯದ ಪ್ರತಿ ಮನೆಗಳಿಗೂ, ಕೊಳಾಯಿ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ, ದಲಿತರಿಗೆ ಮಾತ್ರ ಕೊಳಾಯಿ ಸಂಪರ್ಕ ಕಲ್ಪಿಸಿಲ್ಲ. ಕುಡಿಯುವ ನೀರಿನ ಬವಣೆ ನೀಗಿಸಲು ನಿರ್ಮಿಸಿದ್ದ ಓವರ್‌ ಹೆಡ್‌ ಟ್ಯಾಂಕ್‌ನಿಂದ ಕಳೆದ 15 ವರ್ಷದಿಂದ ಹನಿ ನೀರನ್ನು ಕೊಡದೆ, ಇತರೆ ಸಮುದಾಯಗಳಿಗೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಮಸ್ಯೆ ಹೇಳಿಕೊಳ್ಳಲು ನಾಯಕರಿಲ್ಲ: ಆದಿ ಜಾಂಬವ ಸಂಘಟನೆ ತಾಲೂಕು ಅಧ್ಯಕ್ಷ ವರದರಾಜು ಮಾತನಾಡಿ, ದಲಿತರು ಮನುಷ್ಯರೇ ಎಂಬ ಭಾವನೆ ಯಾರಲ್ಲೂ ಇಲ್ಲ. ಊರ ಹಬ್ಬ ಆಚರಿಸುವಾಗ ಗ್ರಾಮದ ಮುಖ್ಯರಸ್ತೆಯಲ್ಲಿ ಮೆರ ವಣಿಗೆ ಮಾಡಲು ಬಿಡುವುದಿಲ್ಲ. ಕಾಲೋನಿಯಲ್ಲಿ ಯಾರಾದರೂ ಮೃತಪಟ್ಟರೇ, ಶವ ಸಂಸ್ಕಾರ ಮಾಡುವುದು ಒಂದು ಸವಾಲಿನ ಕೆಲಸ. ನಮ್ಮ ಸಮಸ್ಯೆ ಹೇಳಿಕೊಳ್ಳಲು ರಾಜಕೀಯ ನಾಯಕರಿಲ್ಲ. ಗ್ರಾಮದಲ್ಲಿ 80 ಮಾದಿಗ ಕುಂಟುಂಬಗಳಿದ್ದು, 15 ವರ್ಷದಿಂದ ಗ್ರಾಪಂ ಸದಸ್ಯರಾಗಲು ಮೀಸಲಾತಿಯೇ ಸಿಕ್ಕಿಲ್ಲ ಎಂದು ಬೇಸರಿಸಿದರು.

ಪಿಡಿಒ ವರ್ಗಾವಣೆಗೆ ಆಗ್ರಹ: ವಸತಿ ವ್ಯವಸ್ಥೆಗಾಗಿ ಸರ್ಕಾರದಿಂದ ಆರು ಎಕರೆ ಭೂಮಿ ಮಂಜೂರಾಗಿದೆ. ಆ ಜಾಗದಲ್ಲಿ ಮಾದಿಗರಿಗೆ ನಿವೇಶನ ಸಿಗಬಾರದು ಎಂದು ದೇಗುಲ ನಿರ್ಮಿಸುವ ಹುನ್ನಾರ ನಡೆದಿದ್ದು,ಇದಕ್ಕೆಲ್ಲ ಪಿಡಿಒ ಸಹಕಾರ ನೀಡುತ್ತಿದ್ದಾರೆ. ಸರ್ಕಾರಿಅಧಿಕಾರಿಯಾಗಿ ಒಂದು ಸಮುದಾಯದ ಪರವಾಗಿ ನಿಲ್ಲುವುದು ಎಷ್ಟು ಸರಿ. ಇಂತಹ ಅಧಿಕಾರಿಗಳಿಂದನಮಗೆ ಎಂದೂ ನ್ಯಾಯ ಸಿಗುವದಿಲ್ಲ. ಇವರನ್ನುಶೀಘ್ರ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ, ಜಿಲ್ಲಾಕೇಂದ್ರದ ಎದುರು ತಮಟೆ ಚಳುವಳಿನಡೆಸಲಾಗುವುದು ಎಂದು ಎಚ್ಚರಿಸಿದರು.

Advertisement

ಪ್ರತಿಭಟನೆಯಲ್ಲಿ ಅಂಬೇಡ್ಕರ ಯುವಕ ಸಂಘದ ಅಧ್ಯಕ್ಷ ಪ್ರದೀಪ್‌, ಮಂಜುನಾಥ್‌, ಮಹದೇಶ್‌, ಗಿರೀಶ್‌, ಮುತ್ತುರಾಜು, ವೆಂಕಟೇಶ್‌,ಶ್ರೀನಿವಾಸ್‌, ಕಾಂತು, ಹನುಮಂತು, ಮಹಲಿಂಗಯ್ಯ, ಗಂಗಮಾಳಮ್ಮ, ಭಾಗ್ಯಮ್ಮ, ಗೌರಮ್ಮ, ಶಿವರತ್ಮಮ್ಮ, ತುಳಸಮ್ಮ, ಕಾಳಪ್ಪ, ಗ್ರಾಮಸ್ಥರಿದ್ದರು.

ಸರ್ವಾಧಿಕಾರಿಯಂತೆ ವರ್ತಿಸುವ ಪಿಡಿಒ  :  ಗ್ರಾಪಂ ಪಿಡಿಒ ಪಕ್ಕದ ಗ್ರಾಮದವರು. ಬಿಲ್‌ ಕಲೆಕ್ಟರ್‌ ಹುದ್ದೆಯಿಂದ ಪಿಡಿಒ ಆಗಿ ಬಡ್ತಿ ಪಡೆದು ದಶಕಗಳಿಂದ ತಮ್ಮ ಪ್ರಭಾವ ಬಳಸಿ, ಇಲ್ಲಿಯೇ ಟಿಕಾಣಿ ಹೂಡಿದ್ದಾರೆ. ಸರ್ವಾಧಿಕಾರಿ ಯಂತೆ ವರ್ತಿಸುತ್ತಾರೆ. ಪ್ರತಿ ಪಿಡಿಒಗಳಿಗೂ ಒಂದೆರಡು ವರ್ಷಗಳ ನಂತರ ವರ್ಗಾವಣೆ ಮಾಡುವ ಇಲಾಖೆ ಅಧಿಕಾರಿಗಳು, ಇವರ ವಿಷಯದಲ್ಲಿ ಮಾತ್ರ ಯಾಕೆ ಮೀನಾಮೇಷ ಎಣಿಸುತ್ತಿದ್ದಾರೆ. ಒಬ್ಬ ಪಿಡಿಒ ಒತ್ತಡಕ್ಕೆ ಇಡೀ ಇಲಾಖೆಯೇ, ಮಂಡಿಯೂರಿರುವುದು ವಿಪರ್ಯಾಸ ಎಂದು ವರದರಾಜು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next