Advertisement

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

01:10 PM Jul 14, 2020 | Suhan S |

ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಐಟಿಯೂ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕೋವಿಡ್‌-19 ಭಾಗವಾಗಿ ಇಡೀ ರಾಜ್ಯದ ಜನತೆ ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರದ ಸೂಚನೆಯಂತೆ ಅಂಗನವಾಡಿಗಳನ್ನು ಬಂದ್‌ ಮಾಡಿದರೂ ಕೋವಿಡ್‌-19 ಸಂಬಂಧಿತ ಕೆಲಸ ಕಾರ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜೀವನವನ್ನೂ ಲೆಕ್ಕಿಸದೇ ಕೆಲಸ ನಿರ್ವಹಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆಗಳಾಗಿವೆ. ಕರಾವಳಿ ಜಿಲ್ಲೆಗಳಲ್ಲಿ ದೋಣಿಯಲ್ಲಿ ಹೋಗಿ ಆಹಾರ ಸಾಮಾಗ್ರಿ ಹಂಚಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಆಹಾರ ಸಾಮಾಗ್ರಿ ಹಂಚಲು ಕೋವಿಡ್‌-19 ಈ ಕೆಲಸದ ಭಾಗವಾಗಿ ಸರ್ವೇ ಮಾಡುವುದು, ಗ್ರಾಮಸ್ಥರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟದ ಸ್ಯಾನಿಟೈಸರ್‌, ಮಾಸ್ಕ್, ಪಿಪಿಇ ಕಿಟ್, ಗ್ಲೌಸ್‌ಗಳನ್ನು ಕೊಡದ ಕಾರಣ ಬೆಳಗಾವಿಯಲ್ಲಿ ಇಬ್ಬರು ಮತ್ತುಕುಣಿಗಲ್‌ನಲ್ಲಿ ಒಬ್ಬರು ಮತ್ತು ನರಗುಂದ ತಾಲೂಕಿನ ಕಾರ್ಯಕರ್ತೆ ಮತ್ತು ಅವರ ಮಗುವಿಗೆ ಸೋಂಕು ತಗುಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಐಸಿಡಿಎಸ್‌ ಯೋಜನೆ ಅನುದಾನ ಹೆಚ್ಚಿಸಬೇಕು. ಕೊರೊನಾ ಸಂದರ್ಭದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 25 ಸಾವಿರ ಪ್ರೋತ್ಸಾಹಧನ ಮತ್ತು ಸ್ಥಳೀಯ ಸಾರಿಗೆ ಬಸ್‌ ಪಾಸ್‌ ಮತ್ತು ಊಟದ ವೆಚ್ಚ ಭರಿಸಬೇಕು. ಈಗಿರುವ ಎನ್‌ಪಿಎಸ್‌ ಲೈಟ್‌ ಬದಲಿಸಿ ಹಳೇ ಪದ್ಧತಿಯಲ್ಲಿ ನಿವೃತ್ತಿ ವೇತನ ಕೊಡಬೇಕು. ಒಂದೇ ಪ್ರಾಜೆಕ್ಟ್‌ನಲ್ಲಿ ಕೆಲವರಿಗೆ ಪಾನ್‌ ಕಾರ್ಡ್‌ ಬಂದಿಲ್ಲ. ಹಣ ಕಡಿತವಾಗಿಲ್ಲ. ಮೇಲ್ವಿಚಾರಕಿಯರ ಹುದ್ದೆಗೆ ಶೇ.100 ಮೀಸಲಾತಿ ಮತ್ತು ಸೇವಾ ಹಿರಿತನದ ಆಧಾರದಲ್ಲಿ ಅಂಗನವಾಡಿ ನೌಕರರಿಗೆ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರೂ ಕೋವಿಡ್ ವಾರಿಯರ್ಸ್ ಆಗಿದ್ದು 50 ಲಕ್ಷ ರೂ. ವಿಮೆ ಕೊಡಬೇಕು. ಸೋಂಕಿತರಿಗೆ 5 ಲಕ್ಷ ಪರಿಹಾರ ನೀಡಬೇಕು. ಬಾಕಿಯಿರುವ ಆರಿಯರ್, ಮರಣ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದಶಿ ಮಾರುತಿ ಚಿಟಗಿ, ತಾಲೂಕಾಧ್ಯಕ್ಷ ಸಾವಿತ್ರಿ ಸಬನೀಸ, ತಾಲೂಕು ಉಪಾಧ್ಯಕ್ಷ ಡಿ.ಎಚ್‌. ರಡ್ಡೇರ, ಲಲಿತಾ ಮಾದರ, ಶಾರದಾ ತೋಟದ, ಅಕ್ಕಮ್ಮ ನರೇಗಲ್ಲ, ವಿಜಯಾ ಪಾಟೀಲ, ತ್ರಿವೇಣಿ ಸೌದಿ, ವಿದ್ಯಾ ಸೊರಟೂರ, ಮಂಜುಳಾ ಅಣ್ಣಿಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next