ಹುಬ್ಬಳ್ಳಿ: ರಾಜ್ಯ ಸರಕಾರವು ತನ್ನ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಒಳ ಜಗಳ ಮುಚ್ಚಿಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕೇಂದ್ರದಿಂದ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬುವುದು ಕಾಂಗ್ರೆಸ್ ಪ್ರೇರಿತವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಯುಪಿಎ ಹಾಗೂ ಇಂದಿನ ಬಿಜೆಪಿ ಆಡಳಿತದಲ್ಲಿ ಅಭಿವೃದ್ದಿ ಯೋಜನೆಗಳನ್ನು ನೋಡಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಹಿಂದೆ ಎಷ್ಟು ತೆರಿಗೆ ಬರುತ್ತಿತ್ತು. ರಾಜ್ಯಕ್ಕೆ ಎಷ್ಟು ಬಿಡುಗಡೆ ಮಾಡುತ್ತಿದ್ದರು ಎಂಬುವುದನ್ನು ಅವಲೋಕನ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಕಾರಣಕ್ಕೆ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರ ಪ್ರತಿಷ್ಠೆಗಾಗಿ ಈ ಹೋರಾಟ ಎಂದು ವ್ಯಂಗ್ಯವಾಡಿದರು.
ಶೇ. 246 ರಷ್ಟು ಜಾಸ್ತಿ ಅನುದಾನ ಬಂದಿದೆ
2004-14 ರಲ್ಲಿ ಯುಪಿಎ ಸರಕಾರವು 60 ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ನಮ್ಮ ಅವಧಿಯಲ್ಲಿ 2.36 ಲಕ್ಷ ಕೋಟಿ ರೂ. ನೀಡಲಾಗಿದ್ದು, ಶೇ.243 ರಷ್ಟು ಹೆಚ್ಚಾಗಿದೆ. ಯುಪಿಎ ಅವಧಿಯ 2004-14 ರಲ್ಲಿ ತೆರಿಗೆ ಹಂಚಿಕೆಯಲ್ಲಿ 81 ಸಾವಿರ ಕೋಟಿ ರೂ. ರಾಜ್ಯಕ್ಕೆ ನೀಡಿದೆ. 2014-24 ರವರೆಗೆ ನಾವು 2.82 ಲಕ್ಷ ಕೋಟಿ ರೂ. ನೀಡಿದ್ದೇವೆ. ಇದರಲ್ಲಿ ಶೇ. 246 ರಷ್ಟು ಜಾಸ್ತಿಯಾಗಿದೆ ಎಂದರು.