ಮಲೇಬೆನ್ನೂರು: ನಿವೃತ್ತ ನ್ಯಾಯಾಧಿಧೀಶ ನಾಗಮೋಹನದಾಸ್ ಆಯೋಗದ ವರದಿ ಅನುಷ್ಠಾನಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಳೆದ 75 ದಿನಗಳಿಂದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಅಹೋರಾತ್ರಿ ನಡೆಸುತ್ತಿರುವ ಶಾಂತಿಯುತ ಧರಣಿಗೆ ಎಲ್ಲಾ ಸಮಾಜದವರೂ ಬೆಂಬಲ ವ್ಯಕ್ತಪಡಿಸಬೇಕು ಎಂದು ಯಲವಟ್ಟಿಯ ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.
ವಾಲ್ಮೀಕಿ ಶ್ರೀಗಳು ನಡೆಸುತ್ತಿರುವ ಧರಣಿ ಬೆಂಬಲಿಸಿ ಪಟ್ಟಣದ ಸ್ವಾಭಿಮಾನಿ ಎಸ್‌ಸಿ-ಎಸ್‌ಟಿ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ಮಲೇಬೆನ್ನೂರಿನಿಂದ ಹರಿಹರದವರೆಗಿನ ಪಾದಯಾತ್ರೆ ಸಂದರ್ಭದಲ್ಲಿ ಶ್ರೀಗಳು ಮಾತನಾಡಿದರು. ಪ್ರಸನ್ನಾನಂದ ಸ್ವಾಮೀಜಿಯವರ ಶಾಂತಿಯುತ ಧರಣಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೊಸಳ್ಳಿ ವೇಮನ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ, ಹಿಂದುಳಿದ ಎಲ್ಲಾ ಸಮಾಜದ ಏಳಿಗೆಗಾಗಿ, ಹಿಂದುಳಿದವರೂ ಇತರರಂತೆ ಸಮಾಜದಲ್ಲಿ ಉನ್ನತ ಹುದ್ದೆ ಪಡೆಯಲಿ ಎಂಬ ಸದುದ್ದೇಶದಿಂದ ವಾಲ್ಮೀಕಿ ಶ್ರೀಗಳು ಧರಣಿ ನಡೆಸುತ್ತಿದ್ದಾರೆ. ಎಲ್ಲಾ ಸಮಾಜದವರು ಅವರಿಗೆ ಬೆಂಬಲ ಸೂಚಿಸಿದಲ್ಲಿ ಅವರಿಗೆ ಮತ್ತಷ್ಟು ಬಲ ತುಂಬಿದಂತಾಗುತ್ತದೆ ಎಂದರು.
ಈಗ ಇರುವ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ನಡೆಸುತ್ತಿರುವ ಧರಣಿ ಐತಿಹಾಸಿಕ ಧರಣಿಯಾಗಿದೆ. ಸರ್ಕಾರ ಮೂಗಿನ ತುದಿಗೆ ತುಪ್ಪ ಸವರುವ ಕೆಲಸ ಮಾಡದೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಸರ್ಕಾರದ ಗಮನಕ್ಕೆ ತರಬೇಕೆಂದು ಮಾಜಿ ಶಾಸಕ ಬಿ.ಪಿ. ಹರೀಶ್ ಅವರಲ್ಲಿ ಮನವಿ ಮಾಡಿದರು.
ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪಾದಯಾತ್ರೆಗೆ ಚಾಲನ ನೀಡಲಾಯಿತು. ಮಾಜಿ ಶಾಸಕ ಬಿ.ಪಿ. ಹರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬಿದ್ ಅಲಿ, ಜಿ. ಅನಂದ್, ಬೆಣ್ಣೆಹಳ್ಳಿ ಹಾಲೇಶಪ್ಪ, ನಂದಿಗಾವಿ ಶ್ರೀನಿವಾಸ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಎಸ್.ಜಿ. ಪರಮೇಶ್ವರಪ್ಪ, ಬೋವಿ ಕುಮಾರ್, ಪಿ.ಎಸ್. ಶಿವಕುಮಾರ್, ಎ.ಕೆ. ಲೋಕೇಶ್, ಸೋಮಶೇಖರಪ್ಪ, ಬಸವರಾಜ್, ಮಂಜು, ಬಸವರಾಜ್ ದೊಡ್ಮನಿ, ಕಿರಣ್, ಅಶೋಕ್, ವೀರಭದ್ರಪ್ಪ, ಮೊದಲಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್‌ಐಗಳಾದ ರವಿಕುಮಾರ್, ಶಂಕರ್ ಗೌಡ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.