ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಲೋಕಪ್ಪನ ಹಕ್ಕಲದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವೈದ್ಯಕೀಯ ಮತ್ತು ತಾಂತ್ರಿಕ ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ನಿಲಯದ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಅಲ್ಲದೆ ನಿಲಯ ಪಾಲಕ (ವಾರ್ಡನ್) ಹಾಗೂ ಅಡುಗೆ ಕೆಲಸಗಾರರನ್ನು ಬದಲಿಸಬೇಕೆಂದು ಒತ್ತಾಯಿಸಿದರು. ಲೋಕಪ್ಪನ ಹಕ್ಕಲದಲ್ಲಿರುವ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕಳೆದ 2-3 ವರ್ಷಗಳಿಂದ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಆಹಾರದಲ್ಲಿ ಕಲ್ಲು, ಇಲಿಯ ಹಿಕ್ಕಿ, ನುಸಿ, ಹುಳು ಸೇರಿದಂತೆ ಇನ್ನಿತರೆ ಕ್ರಿಮಿಗಳು ಬರುತ್ತಿವೆ.
ವಾರದ ಹಿಂದೆಯೇ ಖರೀದಿಸಿದ ಕಾಯಿಪಲ್ಲೆ ನೀಡಲಾಗುತ್ತಿದೆ. ಇದರಿಂದ ನಿಲಯದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಈ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ. ಕಳಪೆ ಆಹಾರ ಕುರಿತು ವಾರ್ಡನ್ ಅವರಿಗೆ ಅನೇಕ ಬಾರಿ ತಿಳಿಸಿದರೂ ವಿದ್ಯಾರ್ಥಿಗಳ ಮೇಲೆಯೇ ಆಪಾದನೆ ಮಾಡುತ್ತಾರೆ ಹಾಗೂ ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು.
ದೂರಿತ್ತವರನ್ನೇ ಗುರಿಯಾಗಿಸಿಕೊಂಡು ಅವರ ಮೇಲೆ ವಾರ್ಡನ್ ಇನ್ನಿಲ್ಲದ ಆರೋಪ ಮಾಡುತ್ತಾರೆ. ನಿಲಯದಿಂದ ಹೊರಗೆ ಹಾಕುತ್ತಾರೆ. ಎರಡು ಚಪಾತಿಗಿಂತ ಹೆಚ್ಚಿಗೆ ಕೊಡಲ್ಲ. ನಿಗದಿತ ಸಮಯಕ್ಕಿಂತ ಅರ್ಧ ತಾಸು ಮುಂಚಿತವೇ ಊಟ ಕೊಡುವುದನ್ನು ನಿಲ್ಲಿಸುತ್ತಾರೆ. ಆಹಾರದಲ್ಲಿ ಹುಳು ಬಂದಿದೆ ಎಂದರೆ, ನೀವೇನು ಚಿಕನ್ ತಿನ್ನಲ್ಲವೆ.
ನಿಮಗೆ ಈ ಊಟ ಹೊಂದಲ್ಲ. ಬೇಕಾದರೆ ಫೈವ್ ಸ್ಟಾರ್ ಹೋಟೆಲ್‌ಗೆ ಹೋಗಿ ಎನ್ನುತ್ತಾರೆ. ನಿಲಯದಲ್ಲಿ ಸದ್ಯ 70 ವಿದ್ಯಾರ್ಥಿಗಳಿದ್ದೇವೆ. ಹೊಸದಾಗಿ 20 ವಿದ್ಯಾರ್ಥಿಗಳು ಬರುವವರಿದ್ದಾರೆ. ಇಲ್ಲಿನ ಅಡುಗೆ ಸಿಬ್ಬಂದಿಯು ಎಲೆ-ಅಡಿಕೆ, ತಂಬಾಕು ತಿನ್ನುತ್ತಲೇ ಆಹಾರ ತಯಾರಿಸುತ್ತಾರೆ. ಧೂಮ್ರಪಾನ ಮಾಡುತ್ತಾರೆ.
ಮದ್ಯ ಸೇವಿಸಿಕೊಂಡು ಬರುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ನಿಲಯದಲ್ಲಿ ರವಿವಾರ ನೀಡಿದ್ದ ಆಹಾರದಲ್ಲಿ ಇಲಿಯ ಹಿಕ್ಕಿ ಬಂದಿತ್ತು. ಇದರಿಂದಾಗಿ ಮೂವರು ವಿದ್ಯಾರ್ಥಿಗಳು ವಾಂತಿ ಮಾಡಿದ್ದರು. ಈ ಕುರಿತು ನಿಲಯ ಪಾಲಕರಿಗೆ ತಿಳಿಸಿದರೆ ನೀವೇ ಉದ್ದೇಶಪೂರ್ವಕವಾಗಿ ಮಾಡಿದ್ದೀರಿ ಎಂದು ನಮ್ಮ ಮೇಲೆಯೇ ದಬಾಯಿಸಿದ್ದಾರೆ.
ಹೀಗಾಗಿ ನಾವೆಲ್ಲ ಸೋಮವಾರದಿಂದ ನಿಲಯದಲ್ಲಿ ಊಟ ಮಾಡುವುದನ್ನು ಬಿಟ್ಟಿದ್ದೇವೆ ಎಂದರು. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಇನ್ನಾದರೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಆಯುಕ್ತರು ಇತ್ತ ಗಮನ ಹರಿಸಬೇಕು. ನಿಲಯ ಪಾಲಕ ಮತ್ತು ಅಡುಗೆ ಸಿಬ್ಬಂದಿ ಬದಲಾಯಿಸಬೇಕೆಂದು ಆಗ್ರಹಿಸಿದರು.