ಬೀದರ್ : ಆಕಸ್ಮಿಕ ಮರಣ ಹೊಂದುವ ಕುರಿ ಹಾಗೂ ಮೇಕೆಗಳಿಗೆ ಪರಿಹಾರ ನೀಡುವ ಯೋಜನೆ ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಕುರಿಗಾರರು ನಗರದಲ್ಲಿ ಸೋಮವಾರ ಸತ್ತ ಕುರಿಯೊಂದಿಗೆ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಸಾಯಿ ಆದರ್ಶ ಶಾಲೆ ಆವರಣದಲ್ಲಿ ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ ನೇತೃತ್ವದಲ್ಲಿ ಜಮಾಯಿಸಿದ ಕುರಿಗಾರರು ಅಲ್ಲಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಅಲ್ಲಿ ಕೆಲ ಕಾಲ ಸತ್ತ ಕುರಿ ಇಟ್ಟು ಪ್ರತಿಭಟನೆ ನಡೆಸಿ, ನಂತರ ಸಿಎಂಗೆ ಬರೆದ ಮನವಿ ಪತ್ರವನ್ನು ಡಿಸಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಸರ್ಕಾರ ಹಿಂದೆ ಆಕಸ್ಮಿಕ ಮರಣ ಹೊಂದಿದ ಕುರಿ ಮತ್ತು ಮೇಕೆ ಹಾಗೂ ಅವುಗಳ ಮರಿಗಳಿಗೆ ಪರಿಹಾರ ನೀಡುವ ಯೋಜನೆ ಜಾರಿಗೆ ತಂದಿತ್ತು. ಕೆಲ ನಿಗದಿತ ಕಾರಣ ಹಾಗೂ ರೋಗಗಳಿಂದ ಮರಣ ಹೊಂದುವ 3 ರಿಂದ 6 ತಿಂಗಳ ಮರಿಗಳಿಗೆ 2,500 ರೂ. ಹಾಗೂ 6 ತಿಂಗಳ ಮೇಲ್ಪಟ್ಟ ಕುರಿ ಹಾಗೂ ಮೇಕೆಗಳಿಗೆ 5 ಸಾವಿರ ಪರಿಹಾರ ರೂ. ಕೊಡಲಾಗುತ್ತಿತ್ತು. ಆದರೆ, ಪ್ರಸ್ತುತ ಸರ್ಕಾರ ಯಾವುದೇ ಅನುದಾನ ನೀಡದ ಕಾರಣ ಯೋಜನೆ ಅನುಷ್ಠಾನವಾಗುತ್ತಿಲ್ಲ. ಕೂಡಲೇ ಅಗತ್ಯ ಅನುದಾನ ಒದಗಿಸಿ ಯೋಜನೆ ಮುಂದುವರಿಸಬೇಕು ಎಂದು ಚಿದ್ರಿ ಒತ್ತಾಯಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಹಿರಿಯ ಮುಖಂಡ, ಅಸ್ಸಾಂ ಮಾಜಿ ಮುಖ್ಯಮಂತ್ರಿ ಗೊಗೊಯಿ ವಿಧಿವಶ
ಕೇಂದ್ರದ ಎನ್‌ಸಿಡಿಸಿ ಯೋಜನೆಯಡಿ 25 ಸಾವಿರ ಕುರಿ ಸಾಕಾಣಿಕೆದಾರರಿಗೆ 187.50 ಕೋಟಿ ರೂ. ಆರ್ಥಿಕ ನೆರವು ಕಲ್ಪಿಸಲು ರಾಜ್ಯ ಸರ್ಕಾರ 2018-19ನೇ ಸಾಲಿನ ಬಜೆಟ್‌ನಲ್ಲಿ ಖಾತರಿ ಒದಗಿಸುವ ಭರವಸೆ ನೀಡಿತ್ತು. ಅದರಂತೆ ಕೂಡಲೇ ಖಾತರಿ ಕೊಟ್ಟು ಕುರಿಗಾರರಿಗೆ ಅನುಕೂಲ ಮಾಡಿಕೊಡಬೇಕು. ಕುರಿ ಮತ್ತು ಮೇಕೆಗಳಿಗೆ ಜಂತುನಾಶಕ ಔಷಧಿ ಪೂರೈಸಬೇಕು. ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಆಗುತ್ತಿರುವ ತೊಂದರೆ ಪರಿಹರಿಸಬೇಕು. ಎಲ್ಲ ಡಿಸಿಸಿ ಬ್ಯಾಂಕ್‌ಗಳಲ್ಲೂ ಕುರಿಗಾರರಿಗೆ ಸದಸ್ಯತ್ವ ನೀಡಬೇಕು ಎಂದು ಆಗ್ರಹಿಸಿದರು.
ಕುರಿಗಾರರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಮೊದಲ ಹಂತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ನಂತರ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ, ಬಳಿಕ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಂಘಗಳ ಪ್ರತಿನಿಧಿಗಳಾದ ಪಂಡಿತ ಕೌಠಾ, ಶಿವಕುಮಾರ ಬೆಳಕೇರಿ, ಕಲ್ಲಪ್ಪ ಯರನಳ್ಳಿ, ಕಲ್ಲಪ್ಪ ಹೊಳಸಮುದ್ರ, ದೀಪಕ ಹೊಳಸಮುದ್ರ, ಶರಣಪ್ಪ ಹೆಡಗಾಪುರ, ನಾಗನಾಥ ರಕ್ಷಾಳ ಸೇರಿ ಇನ್ನಿತರರು ಇದ್ದರು.