Advertisement

ಎರಡು ವಾರದಲ್ಲಿ ಎರಡನೇ ಬಾರಿಗೆ ಪ್ರತಿಭಟನೆ !

06:25 AM Mar 13, 2018 | |

ಉಡುಪಿ: ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಮಾ.12 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಮತ್ತೂಮ್ಮೆ ಪ್ರತಿಭಟನೆ ನಡೆಸಿದರು. ಇದು ಎರಡು ವಾರಗಳ ಅಂತರದಲ್ಲಿ ಎರಡನೇ ಬಾರಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ನಾಡದೋಣಿ ಮೀನುಗಾರರ ಪ್ರತಿಭಟನೆ.

Advertisement

ಫೆ.26ರಂದು ಸೀಮೆಎಣ್ಣೆಗಾಗಿ ಪಟ್ಟು ಹಿಡಿದಿದ್ದ ಮೀನುಗಾರರು ಅದರಲ್ಲಿ ಭಾಗಶಃ ಯಶಸ್ಸು ಕಂಡಿದ್ದರು. ಮಾರ್ಚ್‌ವರೆಗಿನ ಸೀಮೆಎಣ್ಣೆ ಬಿಡುಗಡೆಗೆ ಸರಕಾರ ಕ್ರಮ ಕೈಗೊಂಡಿತ್ತು. ಆದರೆ ಈ ಬಾರಿ ನಾಡದೋಣಿ ಮೀನುಗಾರರದ್ದು ಎರಡು ಬಲವಾದ ಬೇಡಿಕೆಗಳಿದ್ದವು. ಒಂದನೆಯದು ಮೀನುಗಳ ಸಂತತಿಯೇ ನಾಶವಾಗಿ ಮತ್ಸéಕ್ಷಾಮ ಉಂಟು ಮಾಡ ಲಿರುವ ಅಸಾಂಪ್ರದಾಯಿಕ ಮೀನುಗಾರಿಕೆ ನಿಷೇಧಿಸಬೇಕು ಎಂಬುದು. 

ಎರಡನೆಯ ಬೇಡಿಕೆ ಎಪ್ರಿಲ್‌ ಮತ್ತು ಮೇ ತಿಂಗಳ ಸೀಮೆಎಣ್ಣೆ ಬಿಡುಗಡೆಗೆ ಕ್ರಮ ಕೈಗೊಳ್ಳ ಬೇಕು ಎನ್ನುವುದಾಗಿತ್ತು.
10ಗಂಟೆಗೆ ಪ್ರತಿಭಟನೆ ನಿಗದಿಯಾಗಿತ್ತು. ಕ್ಲಪ್ತ ಸಮಯಕ್ಕೆ ಮೀನುಗಾರರು ತಮ್ಮ ಶಾಂತಿಯುತ ಪ್ರತಿಭಟನೆ ಆರಂಭಿಸಿದರು. ಮೀನುಗಾರಿಕೆಗೆ ರಜೆ ಹಾಕಿ ಹತ್ತಾರು ವಾಹನಗಳಿಂದ ಆಗಮಿಸಿದ್ದ ನೂರಾರು ಮೀನುಗಾರರು ಈ ಬಾರಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ಇದು ರಾಜಕೀಯ ರಹಿತವಾದ ಮತ್ತು ನಿಷ್ಪಕ್ಷಪಾತವಾದ ಪ್ರತಿಭಟನೆ. ನಮಗೆ ದೊರೆಯಬೇಕಾಗಿರುವ ಸೌಲಭ್ಯ ದೊರಕಿಸಿಕೊಡಿ. ಹಿಂದಿನಂತೆ ಈಗ ಧಾರಾಳವಾಗಿ ಮೀನು ದೊರೆಯುತ್ತಿಲ್ಲ. ಲಕ್ಷಾಂತರ ರೂ. ಸಾಲ ಮಾಡಿ, ಚಿನ್ನ ಅಡ ವಿಟ್ಟು ಮೀನುಗಾರಿಕೆ ನಡೆಸುತ್ತಿದ್ದೇವೆ. ಮೀನುಗಾರಿಕೆ ಮತ್ತು ಮೀನುಗಾರರನ್ನು ಉಳಿಸಿ’ ಎಂಬ ಒಕ್ಕೊರಲ ದನಿ ಮೀನುಗಾರ ರದ್ದಾಗಿತ್ತು.
 
ಚುನಾವಣೆ ಕಾರ್ಮೋಡ 
ಈ ಬಾರಿ ನಾಡದೋಣಿ  ಮೀನುಗಾರರಿಗೆ ಚುನಾವಣೆ ನೀತಿ ಸಂಹಿತೆಯ ಭೀತಿ ಕೂಡ ಆವರಿಸಿದೆ. ಯಾಕೆಂದರೆ ಸರಕಾರ ಕೂಡಲೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂಬರುವ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಲಿದೆ. ಅನಂತರ ಸರಕಾರವೂ ಇಲ್ಲ, ಸೀಮೆಎಣ್ಣೆಯೂ ಇಲ್ಲ ಎಂಬ ಸ್ಥಿತಿ ಸೃಷ್ಟಿಯಾಗಲಿದೆ ಎಂಬ ಆತಂಕ ಅವರದ್ದು. ಎಪ್ರಿಲ್‌, ಮೇ ತಿಂಗಳ ಸೀಮೆಎಣ್ಣೆ ಬಿಡುಗಡೆಗೆ ಈಗಲೇ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯಕ್ಕೆ ಸರ ಕಾರ ಮಣಿಯುವುದೇ ಎಂಬುದನ್ನು ಕಾದು ನೋಡಬೇಕಿದೆ. 

ತಾಳ್ಮೆಯಿಂದ ಆಲಿಸಿದ ಡಿ.ಸಿ.
ಪ್ರತಿಭಟನ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಖುದ್ದಾಗಿ ಆಗಮಿಸಿ ಪ್ರತಿಭಟನಾಕಾರರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದರು. ಲೈಟ್‌ ಫಿಶಿಂಗ್‌ ನಿಲ್ಲಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಕೂಡ ವಿವರಿಸಿದರು. ಮುಖಂಡರು ಮಾತ್ರವಲ್ಲದೆ ಸಭೆಯಲ್ಲಿದ್ದ ಇತರ ಮೀನುಗಾರರು ಕೂಡ ಜಿಲ್ಲಾಧಿಕಾರಿಯವರಿಗೆ ನೇರವಾಗಿ ತಮ್ಮ ದೂರನ್ನು ಹೇಳಿದರು. ಇದನ್ನು ಕೂಡ ಆಲಿಸಿದ ಜಿಲ್ಲಾಧಿಕಾರಿ ಅವರು ಬಂದರಿನಲ್ಲಿಯೇ ಇಂತಹ ಬೋಟ್‌ಗಳನ್ನು ತಡೆಹಿಡಿಯಲಾಗುವುದು ಎಂದು ಭರವಸೆ ನೀಡಿದರು. ಸಾಮಾನ್ಯವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅನಂತರ ಪ್ರತಿಭಟನಕಾರರ ಕೆಲವೇ ಮಂದಿ ಪ್ರತಿನಿಧಿಗಳು ಜಿಲ್ಲಾಧಿಕಾರಿ ಅವರ ಕೊಠಡಿಗೆ ತೆರಳಿ ಮನವಿ ಸಲ್ಲಿಸಬೇಕಾಗಿತ್ತು. ಆದರೆ ಈ ಪ್ರತಿಭಟನೆ ವೇಳೆ ಸ್ವತಃ ಜಿಲ್ಲಾಧಿಕಾರಿ ಅವರೇ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದು ಕೂಡ ವಿಶೇಷವೇ ಆಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next