ಕೋಲಾರ: ಅಂಗನವಾಡಿ ಕೇಂದ್ರಗಳನ್ನು ಗ್ರಾಪಂಗಳ ಉಸ್ತುವಾರಿಗೆ ವಹಿಸುವುದನ್ನು ವಿರೋಧಿಸಿ, ಸೇವಾ ಭತ್ಯೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ತಾಲೂಕು ಸಮಿತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿತು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಲ್ಪನಾ ಮಾತನಾಡಿ, ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಪೂರಕವಾಗಿಲ್ಲ. ಸರ್ಕಾರ ಅಂಗನವಾಡಿಗಳ ಉಳಿವಿನತ್ತ ಗಮನ ಹರಿಸಬೇಕು, 6 ವರ್ಷದೊಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು, ಅಂಗನವಾಡಿ ಕೇಂದ್ರಗಳನ್ನು ಪಂಚಾಯಿತಿ ಹಿಡಿತಕ್ಕೆ ವಹಿಸುವಆದೇಶ ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ನೌಕರರಿಗೆ ಸೇವಾ ಭದ್ರತೆ ಒದಗಿಸಿ: ನೂತನ ಶಿಕ್ಷಣ ನೀತಿ ಜಾರಿಗೆ ಬಂದರೆ ಅಂಗನವಾಡಿಗೆ ಮಕ್ಕಳು ಸೇರುವ ಸಂಖ್ಯೆ ಸಂಪೂರ್ಣ ಕಡಿಮೆ ಆಗುತ್ತದೆ. ಬಾಲವಟಿಕಾ ಎಂಬಶಿಶುಪಾಲನಾ ಕೇಂದ್ರದಿಂದ ಅಂಗನವಾಡಿ ನೌಕರರಿಗೆ ಸಂಕಷ್ಟ ಎದುರಾಗುತ್ತದೆ. ಅವರು ಬೀದಿಗೆ ಬೀಳಬೇಕಾಗುತ್ತದೆ. ಹಾಲಿ ಇರುವ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡಬೇಕು. ಅಂಗನವಾಡಿ ನೌಕರರನ್ನು ಐಸಿಡಿಎಸ್‌ನಐದು ಉದ್ದೇಶಗಳಿಗೆ ಮಾತ್ರ ನಿಯೋಜಿಸಬೇಕು. ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಾರ್ಯದರ್ಶಿ ಗಾಂಧಿನಗರ ಮಂಜುಳಾ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲ ಸೌಲಭ್ಯ ಒದಗಿಸಬೇಕು, ಕೋಳಿಮೊಟ್ಟೆಯನ್ನು ಆಹಾರ ಪದಾರ್ಥಗಳ ಜೊತೆಯಲ್ಲಿ ಸರಬರಾಜುಮಾಡಬೇಕು, ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿಸೋಂಕಿತರಾಗಿ ನಿಧನರಾದ ಅಂಗನವಾಡಿ ನೌಕರರಿಗೆ ಕೂಡಲೇ20 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಕನಿಷ್ಠ ವೇತನ ಜಾರಿ ಮಾಡಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಐಎಲ್‌ಸಿ ಶಿಫಾರಸ್ಸಿನಂತೆ ಕನಿಷ್ಠ ವೇತನ ಜಾರಿ ಮಾಡಬೇಕು, ಅಂಗನವಾಡಿ ನೌಕರರನ್ನು ಕಾಯಂಮಾಡಬೇಕು, ಮಿನಿ ಅಂಗನವಾಡಿ ಕೇಂದ್ರಗಳಿಗೆಸಹಾಯಕಿಯರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ವಿಜಯಕೃಷ್ಣ ವಹಿಸಿದ್ದರು. ಅಂಗನವಾಡಿ ನೌಕರರ ಸಂಘದತಾಲೂಕು ಖಜಾಂಚಿ ಲಕ್ಷ್ಮೀದೇವಿ, ಮುಖಂಡರಾದ ಗೌರಮ್ಮ,ಉಮಾ, ರಾಜಮ್ಮ, ಜಯಲಕ್ಷ್ಮೀ, ಲೋಕೇಶ್ವರಿ, ನಾಗರತ್ನ, ವೆಂಕಟಲಕ್ಷ್ಮೀ, ಮುಂತಾದವರು ಇದ್ದರು.