Advertisement

ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ

12:03 PM Oct 26, 2017 | Team Udayavani |

ಮಹಾನಗರ: ಕರ್ನಾಟಕ ಕಾರ್ಮಿಕ ಸಮ್ಮೇಳನ ನಡೆಸುವ ಮೂಲಕ ವಿವಿಧ ವಿಭಾಗದ ಕಾರ್ಮಿಕರ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ, ಗುತ್ತಿಗೆ ಪದ್ಧತಿ ನಿಷೇಧ ಮುಂತಾದ ಬೇಡಿಕೆಗಳ ಕುರಿತು ಸಮಗ್ರ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿ ವಿವಿಧ ವಿಭಾಗದ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಬುಧವಾರ ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಎದುರು ಪ್ರತಿಭಟನ ಪ್ರದರ್ಶನ ನಡೆಯಿತು.

Advertisement

ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿಪಡಿಸಿ 
ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸರಕಾರದ ನೀತಿಯಿಂದಾಗಿ ನಿರುದ್ಯೋಗಿಗಳಾಗುತ್ತಿರುವ ಬೀಡಿ ಕಾರ್ಮಿಕರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಉದ್ಯೋಗ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಬೇಕಾಗಿದೆ. ಸಾವಿರ ಬೀಡಿಗೆ 350 ರೂ.ಕನಿಷ್ಠ ಕೂಲಿ ನಿಗದಿಪಡಿಸಬೇಕಾಗಿದ್ದು, ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಲಹಾ ಸಮಿತಿಯನ್ನು ಪುನರ್‌ರಚಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಿ
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ| ಬಿ. ಆರ್‌. ಅಂಬೇಡ್ಕರ್‌ ಅವರು ಕಾರ್ಮಿಕ ಸಚಿವರಾಗಿದ್ದ 75ನೇ ವರ್ಷಾಚರಣೆಯ ಅಂಗವಾಗಿ ಡಿ. 6ರಂದು ಕರ್ನಾಟಕ ಕಾರ್ಮಿಕ ಸಮ್ಮೇಳನವನ್ನು ನಡೆಸಬೇಕೆಂದು ಈ ಹಿಂದೆಯೇ ರಾಜ್ಯ ಸರಕಾರಕ್ಕೆ ಒತ್ತಡ ಹಾಕಿದ್ದರೂ, ಯಾವುದೇ ರೀತಿಯ ಸ್ಪಂದನವಿಲ್ಲ. ಗುತ್ತಿಗೆ ಕಾರ್ಮಿಕರನ್ನು ಅಸ್ಸಾಂ ಹಾಗೂ ತಮಿಳನಾಡು ಮಾದರಿಯಲ್ಲಿ ಖಾಯಂಗೊಳಿಸಬೇಕು. ಎಲ್ಲ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್‌ ಬಜಾಲ್‌ ಪ್ರಸ್ತಾವನೆಗೈದರು. ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಉಪ ಕಾರ್ಮಿಕ ಆಯುಕ್ತರಿಗೆ ಮನವಿ ನೀಡಲಾಯಿತು. ಸಿಐಟಿಯು ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಯೋಗೀಶ್‌ ಜಪ್ಪಿನಮೊಗರು, ಜಯಂತಿ ಬಿ. ಶೆಟ್ಟಿ, ಜಯಂತ ನಾಯ್ಕ, ಸದಾ ಶಿವದಾಸ್‌, ಯು. ಬಿ. ಲೋಕಯ್ಯ, ರಾಧಾ, ಬಾಬು ದೇವಾಡಿಗ, ಭಾರತಿ ಬೋಳಾರ್‌, ವಸಂತಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next