Advertisement

ಸೇವೆ ಕಾಯಂಗೆ ಆಗ್ರಹಿಸಿ ಪ್ರತಿಭಟನೆ

11:22 AM Jul 29, 2020 | Suhan S |

ಹಾಸನ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಿಕೊಳ್ಳಲು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಿ, ಸೇವೆಯಲ್ಲಿರುವ ತಮ್ಮನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

Advertisement

ಜಯಕರ್ನಾಟಕ ಸಂಘಟನೆಯ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ ಅತಿಥಿ ಉಪನ್ಯಾಸಕರು, ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14564 ಅತಿಥಿ ಉಪನ್ಯಾಸಕರು ಕನಿಷ್ಠ ವೇತನ ಪಡೆದು ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ.

ಕೋವಿಡ್ ಸಂಕಷ್ಟದ ದಿನಗಳಲ್ಲಿ 4 ತಿಂಗಳಿಂದ ವೇತನವಿಲ್ಲದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಈಗ ಕಾಲೇಜು ಶಿಕ್ಷಣ ಇಲಾಖೆ ಹೊಸದಾಗಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕಳೆದ ಜು.7 ರಂದು ಅಧಿಸೂಚನೆ ಹೊರಡಿಸಿದೆ. ಇದರಿಂದ 2400ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ಉದ್ಯೊಗ ಭದ್ರತೆ, ವೇತನ ಹೆಚ್ಚಳ ಮತ್ತು ಕಾಯಂ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಸರ್ಕಾರವೂ ಅದೇ ಮಾದರಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ನಿಟ್ಟಿನಲ್ಲಿ ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸಿ, ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು.

ಲಾಕ್‌ಡೌನ್‌ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ಕೂಡಲೇ ವೇತನ ಬಿಡುಗಡೆ ಮಾಡಬೇಕು. ಸೇವಾ ಭದ್ರತೆ ಇಲ್ಲದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ಧನ ಎಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next