ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರ ಮಾಡಲು ಆಗ್ರಹಿಸಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟವು ಶುಕ್ರವಾರ 597 ದಿನಗಳನ್ನು ಪೂರೈಸಿದೆ.
ಉಪವಾಸ ಸತ್ಯಾಗ್ರಹ ಆರಂಭ : ತಾಲೂಕಿಗಾಗಿ ಒತ್ತಾಯಿಸಿ 350 ದಿನ ಬಿಜೆಪಿ ಸರ್ಕಾರದಲ್ಲಿ, 200 ದಿನಗಳಿಂದ ಹಾಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೋರಾಟ ಮುಂದುವರೆದಿದೆ. ಎರಡು ಸರ್ಕಾರಗಳು ಮತ್ತು ಅದರ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ಹೋರಾಟವು ಇದೆ ಡಿ.4 ರಂದು 600 ದಿನಗಳನ್ನು ಪೂರೈಸುತ್ತಿದ್ದರು ಸಹ ತಾಲೂಕು ರಚನೆಯಾಗುವ ಸೂಚನೆಗಳು ಕಾಣದೇ ಇರುವದರಿಂದಾಗಿ ಸುಮಾರು 20 ಜನ ಹೋರಾಟಗಾರರು ಡಿ.1 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬೃಹತ್ ಪಾದಯಾತ್ರೆ : ಶುಕ್ರವಾರ ಮುಂಜಾನೆ 10-30 ಕ್ಕೆ ಪಟ್ಟಣದ ಬಸವ ವೃತ್ತದಿಂದ ಹೋರಾಟಗಾರು ಪಾದಯಾತ್ರೆ ಮೂಲಕ ಚನ್ನಮ್ಮ ವೃತ್ತ ಸಮೀಪದ ತಾಲೂಕು ಹೋರಾಟದ ವೇದಿಕೆಗೆ ಆಗಮಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ ಸಂಗಪ್ಪ ಹಲ್ಲಿ, ಮುಖಂಡರಾದ ಧರೆಪ್ಪ ಸಾಂಗ್ಲಿಕರ್, ರಂಗನಗೌಡ ಪಾಟೀಲ್, ಅರ್ಜುನ ಹಲಗಿಗೌಡರ, ಮಹಾದೇವ ಮಾರಾಪೂರ, ಶಿವಲಿಂಗ ಟಿರ್ಕಿ, ಸುವರ್ಣ ಆಸಂಗಿ, ಸಿದ್ದು ಶಿರೋಳ, ರಾಜು ತೇರದಾಳ ಮಾತನಾಡಿ ಇದು ನಮ್ಮ ಅಂತಿಮ ಹೋರಾಟವಾಗಿದೆ. ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ನಮ್ಮ ಉಪವಾಸ ಸತ್ಯಾಗ್ರಹವನ್ನು ಗಂಭೀರವಾಗಿ ಪರಿಗಣಿಸಿ ಬೆಳಗಾವಿ ಅಧಿವೇಶನದಲ್ಲಿ ನಮ್ಮ ತಾಲೂಕು ಘೋಷಿಸಬೇಕು. ಉಪವಾಸ ಸತ್ಯಾಗ್ರಹದಲ್ಲಿ ಏನಾದರೂ ಅನಾಹುತ ಸಂಭವಿದಿದರೆ ಅದಕ್ಕೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಮತ್ತು ಸರ್ಕಾರವೇ ನೇರಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಮಹಾಲಿಂಗಪುರ, ಸಂಗಾನಟ್ಟಿ, ಕೆಸರಗೊಪ್ಪ, ಬಿಸನಾಳ, ಮದಭಾವಿ ಗ್ರಾಮಗಳ ಒಟ್ಟು 20 ಜನರು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ವೆಂಕಣ್ಣ ಗುಂಡಾ,ದುಂಡಪ್ಪ ಜಾಧವ, ಭೀಮಸಿ ಸಸಾಲಟ್ಟಿ, ಈರಣ್ಣ ಹಲಗತ್ತಿ, ಈಶ್ವರ ಮುರಗೋಡ, ರಫೀಕ್ ಮಾಲದಾರ, ನಿಂಗಪ್ಪ ಬಾಳಿಕಾಯಿ, ವಿರೇಶ ಆಸಂಗಿ, ಸಿದ್ದುಗೌಡ ಪಾಟೀಲ್, ಶಿವನಗೌಡ ಪಾಟೀಲ್, ಸಂತೋಷ ಹುದ್ದಾರ, ಅರ್ಜುನ ಮೋಪಗಾರ,ಮಲ್ಲಪ್ಪ ಮಿರ್ಜಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: Chikkamagaluru: ಪೊಲೀಸರಿಂದ ಹಲ್ಲೆ ಪ್ರಕರಣ, ಕಾಫಿನಾಡಿನಲ್ಲಿ ವಕೀಲರಿಂದ ಬೃಹತ್ ಪ್ರತಿಭಟನೆ