ಮೈಸೂರು: ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಗನ್‌ಹೌಸ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಇತ್ತೀಚಿಗೆ ಮಾಡಿರುವ ಹೊಸ ಶಿಫಾರಸಿನಲ್ಲಿ 3 ರಿಂದ 8 ವರ್ಷದವರೆಗೆ ಒಂದು ವರ್ಗೀಕರಣ ಮಾಡಿ ಮಾಧ್ಯಮವನ್ನು ಶಿಕ್ಷಣ ಇಲಾಖೆಯಡಿಯಲ್ಲಿ ತೆರೆಯಬೇಕೆಂಬ ಶಿಫಾರಸು ಮಾಡಿದೆ. ಮಾತ್ರವಲ್ಲದೆ ರಾಜ್ಯದಲ್ಲಿ ಮೇ ತಿಂಗಳಿಂದ ಮೂರೂವರೆ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿಗಳನ್ನು ಈಗಾಗಲೇ ಆರಂಭಿಸಲಾಗಿದೆ.
ಶಿಕ್ಷಣ ಇಲಾಖೆ ತಂದಿರುವ ಈ ಸುತ್ತೋಲೆ ಐಸಿಡಿಎಸ್ ಯೋಜನೆಯ ಮತ್ತೂಂದು ತದ್ರೂಪಿ ಕಾರ್ಯಕ್ರಮವೇ ಹೊರತು ಬೇರೇನಲ್ಲ. ಇದರ ಪ್ರಾಸ್ತಾವಿತ ಕಲಿಕೆಯ ಸ್ವರೂಪ ಈಗಾಗಲೆ ಅಂಗನವಾಡಿ ಕೇಂದ್ರಗಳಲ್ಲಿ ಕೊಡಲಾಗುತ್ತಿದೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 4200 ಕೋಟಿ ರೂ.ಗಳನ್ನು ಪೂರಕ ಪೌಷ್ಟಿಕ ಆಹಾರ, ಪೂರ್ವಪ್ರಾಥಮಿಕ ಶಿಕ್ಷಣವನ್ನೊಳಗೊಂಡಂತೆ ಖರ್ಚು ಮಾಡಲಾಗುತ್ತಿದೆ. ಆದರೆ ಸರ್ಕಾರ ಈ ಹಣವನ್ನು ಸದ್ಬಳಕೆ ಮಾಡುವ ಬದಲಿಗೆ ಶಿಕ್ಷಣ ಇಲಾಖೆಯ ಮುಖಾಂತರ ಒಂದೇ ಮಗುವಿನ ಡಬಲ್ ಹಣವನ್ನು ಖರ್ಚು ಮಾಡಲು ಹೊರಟಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಬೇಡಿಕೆಗಳು: ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಂದಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಬೇಕು. ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 9 ವರ್ಷದ ವರ್ಗೀಕರಣವನ್ನು ವಿರೋಧಿಸಬೇಕು. ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್‌ಐಸಿ ಆಧಾರಿತ ಪೆನ್‌ಷನ್ ನೀಡಬೇಕು. ಸೇವಾ ಜೇಷ್ಠತೆಯ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು.
ಮೇಲ್ವಿಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪೂರ್ಣವಾಗಿ ಅಂಗನವಾಡಿ ನೌಕರರಿಗೆ ನೀಡಬೇಕು. ಮುಂಬಡ್ತಿ ಹೊಂದಲು ವಯಸ್ಸಿನ ಮಿತಿ ಸಡಿಲಗೊಳಿಸಬೇಕು. ಸೇವಾ ನಿಯಮಾವಳಿ ರಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಸಂಧ್ಯಾ.ಹೆಚ್.ಎಸ್, ಖಜಾಂಚಿ ಧರ್ಮಾವತಿ, ಪ್ರಧಾನ ಕಾರ್ಯದರ್ಶಿ ಕಾವೇರಮ್ಮ ಸೇರಿದಂತೆ ನೂರಾರು ಮಂದಿ ಇದ್ದರು.