ಮದ್ದೂರು: ಬೆಸಗರಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಕಲ್ಪಿಸಿ ಶೇ.25ರ ಅನುದಾನದಲ್ಲಿ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಟಿ.ಎನ್ .ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿ ಬಳಿ ಆಗಮಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಕೇಂದ್ರ-ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಾಚಿಕೆಗೇಡು: ದೇಶ-ರಾಜ್ಯವನ್ನಾಳುತ್ತಿರುವ ರಾಜಕಾರಣಿಗಳ ಅಸಡ್ಡೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಭೂಮಿ ಹೊಂದುವ ಹಕ್ಕಾಗಲಿ ಮತ್ತು ಸಮುದಾಯದವರು ಮೃತಪಟ್ಟರೆ ಅಂತ್ಯ ಸಂಸ್ಕಾರ ನೆರವೇರಿಸಲು ಸ್ಮಶಾನ ಸೌಲಭ್ಯ ಕಲ್ಪಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ತಲೆ ತಗ್ಗಿಸುವಂತಾಗಿದೆ: ತಾಲೂಕಿನ ಬೆಸಗರ ಹಳ್ಳಿ ಗ್ರಾಪಂ ವ್ಯಾಪ್ತಿಯ ಮಹಾರ್ನವಮಿ ದೊಡ್ಡಿ, ಗೌರಿ ಪಾಳ್ಯ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ದಲಿತ ಸಮುದಾಯದವರು ವಾಸಿಸುತ್ತಿದ್ದರೂ ಅವರಿಗೆ ಸಂವಿಧಾನದಡಿ ಯಾವುದೇ ಸೌಲಭ್ಯ ಕಲ್ಪಿಸದೆ ಮತ್ತು ಸಾರ್ವಜನಿಕರ ಸ್ಮಶಾನಕ್ಕೆ ಪ್ರತ್ಯೇಕ ಸ್ಥಳ ನಿಗದಿಮಾಡದಿರುವುದು ತಲೆ ತಗ್ಗಿಸುವಂತಾಗಿದೆ ಎಂದರು.
ಕೆಲ ಗ್ರಾಮಗಳಲ್ಲಿ ಸ್ಮಶಾನಕ್ಕೆಂದು ಮೀಸಲಿಟ್ಟಿದ್ದ ಜಮೀನನ್ನು ಕೆಲ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು ತಾಲೂಕು ಆಡಳಿತ ಕೂಡಲೇ ಸರ್ವೆಕಾರ್ಯ ಕೈಗೊಂಡು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕೆಂದರು.
ಪ್ರತಿಭಟನೆ ಎಚ್ಚರಿಕೆ: ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಿದ್ದು ಸ್ಮಶಾನ ಒದಗಿಸುವ ಭರವಸೆ ನೀಡಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ವಾರದೊಳಗಾಗಿ ಸ್ಮಶಾನಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸದಿದ್ದರೆ ಪ್ರತಿಭಟನೆ ಹಾದಿ ಹಿಡಿಯುವುದಾಗಿ ಎಚ್ಚರಿಕೆ ನೀಡಿದರು.
ಸಂಘಟನೆ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ, ಜಿಲ್ಲಾ ಸಂಚಾಲಕ ಎಂ.ಶಿವು, ಪದಾಧಿಕಾರಿಗಳಾದ ಬಿ.ಎನ್.ಸತ್ಯಪ್ಪ, ಬಿ.ಪಿ. ಗಿರೀಶ್, ಎಸ್.ಕೆ. ರಾಜೇಶ್, ಸ್ವಾಮಿ, ರವಿ ಕುಮಾರ್, ಚೇತನ್‌ಕುಮಾರ್, ವೆಂಟಕೇಶ್, ಶ್ರೀನಿವಾಸ್, ಭಾನುಪ್ರಕಾಶ್, ಶಂಕರ್, ದೇವರಾಜು, ನಾರಾಯಣ್ ಇತರರಿದ್ದರು.