ಮೈಸೂರು: ಅಲೆಮಾರಿ ಜನರಿಗೆ ನೆಲಮನೆ ನೀಡುವುದು ಸೇರಿದಂತೆ ಭೂಗಳ್ಳರಿಂದ ಕೆರೆ, ರಾಜಕಾಲುವೆ ಹಾಗೂ ಗೋಮಾಳ ರಕ್ಷಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಅಲೆಮಾರಿ ಸಮುದಾಯದವರು ಹಾಗೂ ದಲಿತ ಸಂಘರ್ಷ ಸಮಿತಿ ಸದಸ್ಯರು ಕಂದಾಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರು ಸ್ವಂತಕ್ಕೆ ಜಾಗವಿಲ್ಲದೇ ಕಳೆದ 19 ವರ್ಷಗಳ ಹಿಂದೆ ನಗರದ ಹೆಬ್ಟಾಳ ಕೆರೆಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಈ ಸಂದರ್ಭ ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲಾಡಳಿತ ಅಲ್ಲಿದ್ದ ಗುಡಿಸಲುಗಳನ್ನು ತೆರವುಗೊಳಿಸಿ, ಶ್ಯಾದನಹಳ್ಳಿ ಸರ್ಕಾರಿ ಗೋಮಾಳದಲ್ಲಿ ವಾಸಿಸುವಂತೆ ಮೌಖೀಕ ಆದೇಶ ನೀಡಿತ್ತು.
ನಂತರ 480ಕ್ಕೂ ಹೆಚ್ಚು ಕುಟುಂಬಗಳು ಆ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಈ ಮಧ್ಯೆ ಕೊಳಚೆ ಅಭಿವೃದ್ಧಿ ಮಂಡಳಿ ಇವರಿಗೆ 2017ರಲ್ಲಿ ಜೆ.ನರ್ಮ್ ಯೋಜನೆಯಡಿ ಬಹುಮಹಡಿ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ. ಕಳಪೆ ಕಾಮಗಾರಿಯಿಂದ ಕೂಡಿರುವ ಈ ಕಟ್ಟಡಕ್ಕೆ ಕೆಲವರು ಮಾತ್ರ ಸ್ಥಳಾಂತರಗೊಂಡಿದ್ದು, ಸುಮಾರು 200 ಕುಟುಂಬಗಳು ಅಲ್ಲಿಯೇ ಉಳಿದುಕೊಂಡಿದ್ದು, ನಾವಿರುವ ಸ್ಥಳದಲ್ಲಿಯೇ ನೆಲಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿದರು.
ಮೈಸೂರಿನ ಸುತ್ತಮುತ್ತಲ ಭೂಮಿಗೆ ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ ಬಂದಿರುವುದರಿಂದ ಭೂಗಳ್ಳರು ಸ್ಥಳೀಯ ಕಂದಾಯ ಇಲಾಖಾ ಅಧಿಕಾರಿಗಳ ಸಹಾಯದಿಂದ ಕೆರೆ, ರಾಜ ಕಾಲುವೆ, ಗೋಮಾಳ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ಖಾಸಗಿ ಬಡಾವಣೆಗಳನ್ನು ನಿರ್ಮಿಸಿಕೊಳ್ಳುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ.ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.
ಖಾಸಗಿ ಬಡಾವಣೆಗಳ ಪಾಲಾಗುತ್ತಿರುವ ಕೆರೆ, ಕುಂಟೆ, ಬಾವಿ, ರಾಜ ಕಾಲುವೆಗಳು ಮುಚ್ಚಿಹೋಗಿ, ಅಂತರ್ಜಲ ಬತ್ತಿಹೋಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಬರುವ ಸಂಭವವಿದೆ. ಸರ್ಕಾರಿ ಗೋಮಾಳ ಭೂಗಳ್ಳರ ವಶವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಶಾಲಾ-ಕಾಲೇಜು, ಸ್ಮಶಾನ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಭೂಮಿ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಮೈಸೂರಿನ ಸುತ್ತ, ಮುತ್ತಲಿರುವ ಸರ್ಕಾರಿ ಕೆರೆ, ಕುಂಟೆ, ಬಾವಿ ರಾಜಕಾಲುವೆ, ಗೋಮಾಳ ಭೂಗಳ್ಳರಿಂದ ರಕ್ಷಿಸಿ ಶ್ಯಾದನಹಳ್ಳಿ ಸರ್ಕಾರಿ ಗೋಮಾಳದಲ್ಲಿ ಏಕಲವ್ಯ ನಗರದ ಅಲೆಮಾರಿ ಸಮುದಾಯದವರಿಗೆ ಮನೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ ನಿಂಗರಾಜ್ ಮಲ್ಲಾಡಿ ಇತರರಿದ್ದರು.