ಹುಬ್ಬಳ್ಳಿ: ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಗೊಳಿಸ ಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಮಿನಿ ವಿಧಾನಸೌಧದ ಎದುರು ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಯಿತು. 2004ರಲ್ಲಿ ಅವೈಜ್ಞಾನಿಕ ಹಾಗೂ ಅಭದ್ರತೆಯಿಂದ ಕೂಡಿದ ಎನ್‌ಪಿಎಸ್ ಯೋಜನೆ ಜಾರಿಗೊಳಿಸಲಾಯಿತು.
2006ರಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಯಿತು. ಆದರೆ, ಇದರಲ್ಲಿ ಪಿಂಚಣಿದಾರರಿಗೆ ಕೆಲವು ನ್ಯೂನತೆಗಳಿವೆ. ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ 1.8 ಲಕ್ಷ ಸರಕಾರಿ ನೌಕರರು ಪಿಂಚಣಿ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಲಾಯಿತು.
ಹೊಸ ಪಿಂಚಣಿ ಯೋಜನೆಯಲ್ಲಿ ಜಿಪಿಎಫ್ ಸೌಲಭ್ಯವಿಲ್ಲ. ಪಿಂಚಣಿ ಹಣದಲ್ಲಿ ಶೇ. 10ರಷ್ಟು ಕಡಿಮೆ ನೀಡಲಾಗುತ್ತಿದೆ. ಪಿಂಚಣಿ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿ ಮರಣ ಉಪದಾನವಿಲ್ಲ. ಪಿಂಚಣಿಗಾಗಿ ಸೇವಾ ಶುಲ್ಕ ಕಡಿತವಾಗುತ್ತದೆ.
ಬಾಂಡ್ ರೂಪದ ಭದ್ರತೆಯಿಲ್ಲ. ನೌಕರರಿಗೆ ಗರಿಷ್ಠ ಭರವಸೆಯಿಲ್ಲ. ಆದ್ದರಿಂದ ಹಳೆಯ ಪಿಂಚಣಿ ವ್ಯವಸ್ಥೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಲಾಯಿತು. ರಾಜ್ಯ ಸರಕಾರ 6ನೇ ವೇತನ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಕೂಲತೆ ಕಲ್ಪಿಸಬೇಕೆಂದು ಆಗ್ರಹಿಸಲಾಯಿತು. ತಹಶೀಲ್ದಾರ್ ಮೂಲಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಟಿ.ಆರ್. ಶಿರೋಳ, ಅಶೋಕ ಕಬ್ಬೇರ, ಯು.ಆರ್. ಪೀರಣ್ಣವರ, ಎಂ.ಕೆ. ಲಾಲ್‌ಮಿಯಾ, ಬಸವರಾಜ ಶಿರಹಟ್ಟಿ, ವೈ.ಜಿ. ಸವಣೂರ, ಎ.ಬಿ. ಕಾಡನ್ನವರ, ಡಿ.ಆರ್. ಬೊಮ್ಮನಹಳ್ಳಿ, ಐ.ಎಫ್. ಅಯ್ಯನಗೌಡರ, ಪಿ.ಎಂ. ತಟ್ಟಿಮನಿ, ಜಿ.ಬಿ. ಯಲಭೋವಿ ಮೊದಲಾದವರಿದ್ದರು.