ದೇವನಹಳ್ಳಿ: ಒಳ ಮೀಸಲಾತಿ ಜಾರಿ, ಅಧಿಕಾರಿಗಳ ದಲ್ಲಾಳಿತನ ತನಿಖೆ, ಕಂದಾಯ ಇಲಾಖೆ ಆಯುಕ್ತ ಹರ್ಷ ಗುಪ್ತ ಅಮಾನತು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಜಿಲ್ಲಾ ಮತ್ತು ತಾಲೂಕು ಮಾದಿಗ ದಂಡೋರ ವತಿಯಿಂದ ತಾಲೂಕಿನ ಚಪ್ಪರದಕಲ್ಲು ವೃತ್ತದಲ್ಲಿರುವ ಜಿಲ್ಲಾ ಸಂಕೀರ್ಣದ ಎದುರು ಪ್ರತಿಭಟನೆ ನಡೆಸಿದರು.
ಕೆಐಡಿಬಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ: ರಾಜ್ಯ ಮಾದಿಗ ದಂಡೋರ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ದಲಿತರ ಭೂಮಿ, ವಶಕ್ಕೆ ಪಡೆದಿದ್ದು, ಪರಿಹಾರ ನೀಡುತ್ತಿಲ್ಲ. ಅಧಿಕಾರಿಗಳು ಮತ್ತು ದಲ್ಲಾಳಿಗಳು ಒಪ್ಪಂದ ಮಾಡಿಕೊಂಡು, ಕಮಿಷನ್ ಪಡೆದು ಪರಿಹಾರ ನೀಡುತ್ತಿದ್ದಾರೆ. ಈ ಸಂಬಂಧ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಮಾದಿಗ ಜನಾಂಗದವರ ಮೇಲೆ ದೌರ್ಜನ್ಯ, ಕೊಲೆ, ಸುಲಿಗೆ ಹೆಚ್ಚಿದೆ. ಈ ಸಂಬಂಧ ಸೂಕ್ತ ಕ್ರಮಕೈಗೊಂಡು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್‌ರ ಕನಸು ನನಸಾಗಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಆಯುಕ್ತ ಹರ್ಷಗುಪ್ತ ಅಮಾನತುಗೊಳಿಸಿ: ಶೋಷಣೆ, ದಬ್ಟಾಳಿಕೆ, ಮಾದಿಗರ ಕಗ್ಗೊಲೆ, ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ, ಭೂ ಕಬಳಿಕೆ, ಸರ್ಕಾರಿ ನೌಕರರ ದಲ್ಲಾಳಿತನ, ಶೋಷಿತರ ಪರ ಮೊಸಳೆ ಕಣ್ಣೀರು ಸುರಿಸುವ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ, ದಲಿತ ವಿರೋಧಿಯಾಗಿದ್ದು, ಅಭಿವೃದ್ಧಿ ಕೆಲಸ ಮಾಡದೇ, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಆರೋಪಿಸಿ, ಅವರನ್ನು ಅಮಾನತುಗೊಳಿಸಬೇಕು ಒತ್ತಾಯಿಸಿದರು.
ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷ ಜಿ.ಮಾರಪ್ಪ ಮಾತನಾಡಿ, ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಶಿರೋಳ ಗ್ರಾಮದ ಒಂದೇ ಕುಟುಂಬದ ವಿಠಲ್ ತಲಗೇರಿ, ಮಲ್ಲಪ್ಪ ತಲಗೇರಿ ಅವರ ಜೋಡಿ ಕೊಲೆಗಳ ಆರೋಪಿಗಳನ್ನು ಗಡಿ ಪಾರುಗೊಳಿಸಬೇಕು. ಸರ್ಕಾರ ಶೀಘ್ರ ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ತಾಲೂಕಿನಲ್ಲಿ ಶೋಷಿತರಿಗೆ ಸ್ಮಶಾನ, ಆದಿ ಜಾಂಬವ ಅಭಿವೃದ್ಧಿ ನಿಗಮದ ಪ್ರಯೋಜನ ಪಡೆಲು ಜಾತಿ ಪ್ರಮಾಣ ಪತ್ರದಲ್ಲಿ ಮಾದಿಗ ಎಂದು ನಮೂದಿಸಲು ಆದೇಶಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಮಾದಿಗ ದಂಡೋರ ಪ್ರಚಾರ ಸಮಿತಿ ಅಧ್ಯಕ್ಷ ಎಲ್.ಮುನಿರಾಜು, ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ, ತಾಲೂಕು ಅಧ್ಯಕ್ಷ ಕದಿರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್. ರಾಜಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಬುಳ್ಳಹಳ್ಳಿ ಮುನಿರಾಜು, ತಾಪಂ ಸದಸ್ಯ ಗೋಪಾಲ ಸ್ವಾಮಿ, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಮುನಿರಾಜು, ವಿಜಯಪುರ ಹೋಬಳಿ ಅಧ್ಯಕ್ಷ ಹಾರೋಹಳ್ಳಿ ಮಾರಪ್ಪ, ಕಸಬ ಹೋಬಳಿ ಅಧ್ಯಕ್ಷ ಮುನಿ ಕೃಷ್ಣಪ್ಪ, ಚನ್ನರಾಯ ಪಟ್ಟಣ ಹೋಬಳಿ ಅಧ್ಯಕ್ಷ ಬೂದಿಗೆರೆ ಮುನಿಯಪ್ಪ, ದೇವನಹಳ್ಳಿ ಟೌನ್ ಅಧ್ಯಕ್ಷ ಶ್ರೀನಿವಾಸ್, ವಿಜಯಪುರ ಟೌನ್ ಅಧ್ಯಕ್ಷ ವೆಂಕಟೇಶ್ ಮತ್ತಿತರರು ಇದ್ದರು.