Advertisement

ವಿವಿಗಳಿಗೆ ಕುಲಪತಿಗಳ ನೇಮಿಸಲು ಆಗ್ರಹಿಸಿ ಪ್ರತಿಭಟನೆ

01:44 PM Dec 23, 2017 | Team Udayavani |

ದಾವಣಗೆರೆ: ರಾಜ್ಯದ ಪ್ರಮುಖ 8 ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಕುಲಪತಿ ಹುದ್ದೆ, ಶಿಕ್ಷಣ ಇಲಾಖೆ ಆಯುಕ್ತರ ನೇಮಕಾತಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು.

Advertisement

ಡಿಆರ್‌ಎಂ ವಿಜ್ಞಾನ ಕಾಲೇಜಿನಿಂದ ಮೆರವಣಿಗೆ ಮೂಲಕ ವಿದ್ಯಾರ್ಥಿಗಳು ವಿದ್ಯಾರ್ಥಿ ಭವನ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತಕ್ಕೆ ಆಗಮಿಸಿ, ಆ ವೃತ್ತದಲ್ಲಿ ಘೋಷನೆ ಕೂಗಿದರು. ಅಲ್ಲಿಂದ ಮಹಾತ್ಮಗಾಂಧಿ ವೃತ್ತಕ್ಕೆ ತೆರಳಿ ಕೆಲ ಕಾಲ ರಸ್ತೆ ತಡೆ ನಡೆಸಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ರಾಜ್ಯದ 8 ಪ್ರಮುಖ ವಿವಿಗಳಲ್ಲಿ ಕುಲಪತಿಗಳೇ ಇಲ್ಲ. ಕುಲಪತಿ ನೇಮಕಕ್ಕೆ ಸರ್ಕಾರ ಗಮನ ನೀಡುತ್ತಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತಿರುವಂತಹವರನ್ನು ಮಂಗಳೂರು ವಿವಿ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಕಾಲೇಜುಗಳಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಗಮನ ಹರಿಸುವ ಅತ್ಯಂತ ಜವಾಬ್ದಾರಿ, ಪ್ರಮುಖ ಆಯುಕ್ತರ ಹುದ್ದೆಯೇ ಖಾಲಿ ಇದೆ. ನಿರ್ದೇಶಕರು, ಜಂಟಿ ನಿದೇಶಕರು ಹಾಗೂ 413 ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಪ್ರಾಚಾರ್ಯರೇ ಇಲ್ಲ. ಶಿಕ್ಷಣದ ಸಬಲೀಕರಣ ಹಿನ್ನೆಲೆಯಲ್ಲಿ ಕೂಡಲೇ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ಕ್ಷೇತ್ರದಲ್ಲಿನ ಹಲವಾರು ಪ್ರಮುಖ ಹುದ್ದೆಗಳು ಖಾಲಿ ಇದ್ದರೂ ಭ್ರಷ್ಟಾಚಾರ, ಹಗರಣ ಇವೆ. ಇಡೀ ಶೈಕ್ಷಣಿಕ ಕ್ಷೇತ್ರವೇ ತಲೆತಗ್ಗಿಸುವಂತಹ ಅಂಕಪಟ್ಟಿ ಮತ್ತು ಲ್ಯಾಪ್‌ ಟಾಪ್‌ ಹಗರಣ ನಡೆದಿದೆ. ಸ್ವತಃ ಉನ್ನತ ಶಿಕ್ಷಣ ಸಚಿವರ ವಿರುದ್ಧವೇ ಅವ್ಯವಹಾರದ ಆರೋಪ ಕೇಳಿ ಬರುತ್ತಿದೆ. ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ನಗರ ಸಂಚಾಲಕ ವಿನಯ್‌, ರಾಮು, ಭಾರತಿ, ಶ್ರೀಹರ್ಷ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next