Advertisement

ಮೇಲ್ವಿಚಾರಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

12:39 PM Jul 25, 2017 | Team Udayavani |

ಬಳ್ಳಾರಿ: ಹಣಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಪೀಡಿಸುತ್ತಿರುವ ಮೇಲ್ವಿಚಾರಕಿ ಸುಶೀಲಾ ವಿರುದ್ಧ ಸೂಕ್ತ
ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ಜಿಲ್ಲಾ ಮಂಡಳಿಯ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

Advertisement

ನಗರದ ಎಚ್‌ಆರ್‌ಜಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದ ಅಂಗನವಾಡಿ
ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಮೇಲ್ವಿಚಾರಕಿ ಸುಶೀಲಾ ಅವರ ವಿರುದ್ಧ ಘೋಷಣೆ ಕೂಗಿದರಲ್ಲದೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ತನ್ನ ವ್ಯಾಪ್ತಿಯಲ್ಲಿನ ಕೇಂದ್ರಗಳಿಗೆ ಭೇಟಿ ನೀಡುವ ಮೇಲ್ವಿಚಾರಕಿ ಅಲ್ಲಿನ ಫಲಾನುಭವಿಗಳ ಸಂಖ್ಯೆ ಅಧಿಕಗೊಳಿಸಿ, ತೋರಿಸುತ್ತಾ ಇದರಂತೆ ಬರುವ ಹೆಚ್ಚುವರಿ ರೇಷನ್‌ ಮಾರಾಟ ಮಾಡಿ ಹಣವನ್ನು ತನಗೆ ಮುಟ್ಟಿಸಬೇಕೆಂದು ಎಂದು ತಾಕೀತು ಮಾಡುತ್ತಾರೆ. ಈ ಒಂದು ಅಕ್ರಮಕ್ಕೆ ಸಹಕಾರ ಒದಗಿಸದೇ ಇರುವ ಕಾರ್ಯಕರ್ತೆಯರನ್ನು ಗುರಿಯಾಗಿಸಿಕೊಂಡು ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮೇಲ್ವಿಚಾರಕಿ ಸುಶೀಲಾ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಕಳೆದ 5 ವರ್ಷಗಳಿಂದಲೇ ಮೇಲಿನ ಅಕ್ರಮ ಮತ್ತು ದುರ್ನಡತೆ ಬಗೆ ಎಷ್ಟೇ ಹೋರಾಟ ಮಾಡಿದಾಗಲೂ ಯಾವುದೇ ರೀತಿ ಇಲಾಖೆ ವಿಚಾರಣೆಯಾಗಲಿ, ಶಿಸ್ತಿನ ಕ್ರಮವನ್ನು ಮೇಲಧಿಕಾರಿಗಳು ಕೈಗೊಂಡಿಲ್ಲ. ಅದೇ ವೇಳೆ ಇಲಾಖೆಯ ಶಿಸ್ತು ಪ್ರಾಧಿಕಾರಿಗಳಾಗಿರುವ ಉಪನಿರ್ದೇಶಕರು ಎಷ್ಟೊ ಜನ ಅಂಗನವಾಡಿ ಕಾರ್ಯಕರ್ತೆಯರನ್ನು ಕ್ಷುಲ್ಲಕ ಕಾರಣಗಳಿಗಾಗಿ ವಿಚಾರಣೆ ರಹಿತವಾಗಿ ಕೆಲಸದಿಂದ
ವಜಾಗೊಳಿಸಿದ್ದಾರೆ ಎಂದು ಆರೋಪಿಸಿದರು. ಇವೆಲ್ಲ ಕಾರಣಗಳಿಂದ, ಮೇಲ್ವಿಚಾರಕಿ ಸುಶೀಲಾಳ ಭ್ರಷ್ಟಚಾರ, ದುರ್ನಡತೆ, ಅಸಭ್ಯವರ್ತನೆ, ಮಾನಸಿಕ ಕಿರುಕುಳ ನೀಡುವಿಕೆ ಇವುಗಳ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಮೇಲಧಿಕಾರಿಗಳು ವಿಫಲರಾಗಿರುವುದರಿಂದ
ಮತ್ತು ಉಪನಿರ್ದೇಶಕರ ನಿರ್ಲಕ್ಷ ಧೋರಣೆ, ಪಕ್ಷಪಾತ ಖಂಡಿಸಿದರು. ಬಳಿಕ ಅಪರ್‌ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್‌ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್‌.ಎ. ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಎ.ಆರ್‌.ಎಂ. ಇಸ್ಮಾಯಿಲ್‌, ಎಐವೈಎಫ್‌ ಜಿಲ್ಲಾಧ್ಯಕ್ಷ ಕಟ್ಟೆ ಬಸಪ್ಪ, ಮುದುಕಪ್ಪ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇಷನ್‌ನ ಜಿಲ್ಲಾ ಸಂಚಾಲಕಿ ಅರ್ಕಾಣಿ, ಪ್ರಧಾನ ಕಾರ್ಯದರ್ಶಿ ಈ. ಮಂಗಮ್ಮ, ಎರ್ರೆಮ್ಮ, ಶಾಂತಾ ಪಾಟೀಲ, ಮಂಗಳಗೌರಿ, ಪಾರ್ವತಿ, ಕಲಾವತಿ, ಕೊಂಡಮ್ಮ,
ರೇಣುಕಾ, ಜ್ಯೋತಿ, ವೀರಮ್ಮ, ಮಮತಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next