ನಂಜನಗೂಡು: ರಾಜ್ಯದ ಕೃಷಿಕರ ನಾಲೆಗೆ ನೀರು ಬಿಡದೆ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ತಾಲೂಕಿನ ರೈತ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಹರಿಯುತ್ತಿರುವ ಕಪಿಲೆಯ ದೇವರಾಜು ಅರಸು ಸೇತುವೆಯ ಮೇಲೆ ಮಂಗಳವಾರ ಜಮಾಯಿಸಿದ ರೈತ ಸಮೂಹ ನೀರು ನಿಲ್ಲಿಸಿ ಅದೇ ನೀರನ್ನು ನಾಲೆಗಳಲ್ಲಿ ಹರಿಸಿ ಎಂದು ಆಗ್ರಹಿಸಿ ನಾಲ್ಕು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ರೈತರನ್ನು ಸಮಾಧಾನಿಸಿಲು ಬಂದು ಅಧಿಕಾರಿಗಳಿಗೆ ಛೀಮಾರಿ ಹಾಕಿದ ಕೃಷಿಕರು ನಿಮ್ಮ ಸಬೂಬಿನ ಒಣ ಮಾತು ಬೇಡ ನಮಗೆ ನೀರು ಕೊಡಿ ಎಂದರು. ಕಳೆದ ವಾರ ತಾಲೂಕಿನ ಹುಲ್ಲಹಳ್ಳಿ ರಾಂಪುರ ನಾಲೆಗಳಲ್ಲಿ ನೀರು ಬಿಡುತ್ತೆವೆ ಎಂಬ ನಿಮ್ಮ ಮಾತು ಏನಾಯಿತು ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದು, ನಾಲೆಯಲ್ಲಿ ಬಿಟ್ಟ ನೀರು ಕೆಲವೇ ಗಂಟೆಗಳಲ್ಲಿ ನಿಂತು ಹೊಗಿರುವುದು ಏಕೆ? ಜಲಾಶಯದ ನೀರೆ ಬರಿದಾಯಿತೆ ಎಂದು ಕಿಡಿಕಾರಿದರು.
ಎಂದಿನಂತೆ ಒಂದೆರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ರೈತರು ವಾಪಸಾಗುತ್ತಾರೆ ಎಂದು ಕೊಂಡಿದ್ದ ಅಧಿಕಾರಿಗಳ ನಂಬಿಕೆಯನ್ನು ಈ ಬಾರಿ ಹುಸಿ ಮಾಡಿದ ರೈತ ಸಮೂಹದ ಪ್ರತಿಭಟನೆ ನಾಲ್ಕು ತಾಸಿಗೂ ಹೆಚ್ಚು ನಡೆದು ಅದರ ಅಂತ್ಯ ಕಾಣದಿದ್ದಾಗ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಬಂಧಿಸಿದರು.
ತಗಡೂರು ಜಿಪಂ ಸದಸ್ಯ ಸದಾನಂದ, ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಅಶ್ವಥ್ ನಾರಾಯಣರಾಜೇ ಅರಸ್, ಶಿರಮಳ್ಳಿ ಸಿದ್ದಪ್ಪ, ಹೊಸಕೋಟೆ ಬಸವರಾಜು, ಸತೀಶ್‌ರಾವ್, ಬಂಗಾರಸ್ವಾಮಿ, ಗುರುಲಿಂಗೇಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ರೈತರನ್ನು ಬಂಧಿಸಿ ಮೈಸೂರಿನ ಮೀಸಲು ಸಶಸ್ತ್ರ ಪಡೆಗೆ ರವಾನಿಸಲಾಯಿತು.
ರಸ್ತೆ ಸಂಚಾರ ಅಸ್ತವ್ಯಸ್ತ: 4 ಗಂಟೆಗಳಿಗೂ ಹೆಚ್ಚು ಕಾಲ ಮೈಸೂರು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಸಂಚಾರವು ಸ್ಥಗಿತಗೊಂಡ ಹಿನ್ನೆಲೆ ಪ್ರಯಾಣಿಕರು ವಾಹನ ಸವಾರರು ತೀವ್ರ ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ಹೊಸಕೋಟೆ ಬಸವಾರಾಜು, ರೈತ ಸಂಘದ ಅಧ್ಯಕ್ಷ ವಿದ್ಯಾ ಸಾಗರ್, ಬಂಗಾರಸ್ವಾಮಿ, ಗುರುಲಿಂಗೇಗೌಡ, ಶಿರಮಳ್ಳಿ ಸಿದ್ದಪ್ಪ, ಜಿಪಂ ಸದಸ್ಯ ಸದಾನಂದ, ಮಹದೇವಸ್ವಾಮಿ, ಕರವೇ ಶಿವರಾಮೇಗೌಡ ಬಣದ ಅಧ್ಯಕ್ಷ ರವಿಕುಮಾರ್‌ಗೌಡ, ದಸಂಸ ಜಿಲ್ಲಾ ಸಂಚಾಲಕ ಶಿರಮಳ್ಳಿ ಸಿದ್ದಪ್ಪ, ಬಿಎಸ್ಪಿ ತಾಲೂಕು ಅಧ್ಯಕ್ಷ ಶ್ರೀಕಂಠ, ಬೊಕ್ಕಳ್ಳಿ ನಂಜುಂಡಸ್ವಾಮಿ, ಅಂಬಳೆ ಮಹದೇವಸ್ವಾಮಿ ಮಹೇಶ್, ಶ್ರೀಧರ್, ಮಾದಪ್ಪ, ವೆಂಕಟೇಗೌಡ, ಶಿವರಾಜು, ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ರೈತರು ಇದ್ದರು.