ಕಲಬುರಗಿ: ಆಳಂದ ತಾಲೂಕಿನ ಬೆಣ್ಣೆಶಿರೂರ-ಮಾಡಿಯಾಳ ಮಾರ್ಗದಲ್ಲಿ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿ ಬೆಣ್ಣೆಶಿರೂರ ಗ್ರಾಮಸ್ಥರು ಶ್ರಮಜೀವಿಗಳ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ತ್ವರಿತಗತಿಯಲ್ಲಿ ಶಿಥಿಲಾವಸ್ಥೆಯ ರಸ್ತೆ ಕಾಮಗಾರಿ ಶೀಘ್ರ ಮಾಡಬೇಕೆಂದು ಒತ್ತಾಯಿಸಿದರು.
ಮಾಡಿಯಾಳ ದಿಂದ ಬೆಣ್ಣೆಶಿರೂರ್‌ಗೆ ನಾಲ್ಕು ಕಿ.ಮೀ. ಅಂತರವಿದ್ದು, ಪಿಎಂಜಿಎಸ್‌ವೈ ಯೋಜನೆಯಡಿ ರಸ್ತೆ ನಿರ್ಮಾಣದ ಅಂದಾಜು ಪತ್ರ ತಯಾರಿಸಲಾಗಿದೆ. ಸುತ್ತಲಿನ ಮೂರ್‍ನಾಲ್ಕು ಗ್ರಾಮಗಳಿಂದ ಮಳೆ ನೀರಿನ ದೊಡ್ಡ ಹಳ್ಳ ಹರಿಯುತ್ತಿದ್ದು, ಉತ್ತಮ ರಸ್ತೆ ಮಾಡಿದರೂ ಸಹ ಕಾಮಗಾರಿ ನಿಲ್ಲಲ್ಲ ಎಂದು ಅಭಿಯಂತರರಿಗೆ ತಪ್ಪು ಮಾಹಿತಿ ನೀಡಿ, ಸುತ್ತುವರೆದು ರಸ್ತೆ ಮಾಡಿಸಲಾಗಿದೆ. ಒಬ್ಬ ವ್ಯಕ್ತಿ ಅನಾವಶ್ಯಕವಾಗಿ ಕ್ಯಾತೆ ತೆಗೆದು ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನೇರವಾಗಿ ರಸ್ತೆ ನಿರ್ಮಾಣವಾದರೇ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ
ಎಂದರು.
ಸ್ವಾತಂತ್ರ ಸಿಕ್ಕು ಏಳು ದಶಕಗಳೇ ಕಳೆದರೂ ಬೆಣ್ಣೆಶಿರೂರ ಗ್ರಾಮಸ್ಥರು ಆಳಂದ ಪಟ್ಟಣಕ್ಕೆ ನೇರವಾಗಿ ಹೋಗಲಾಗದೇ ಸಂಕಷ್ಟಕ್ಕೆ ಈಡಾಗಿದ್ದಾರೆ. ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು. ಕೆಲವರು ರಸ್ತೆ ಅಭಿವೃದ್ದಿಗೆ ಅಡ್ಡಿಪಡಿಸುತ್ತಿದ್ದು, ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ, ಗ್ರಾಮದ ಹಣಮಂತರಾವ್ ಪಾಟೀಲ, ಸಿದ್ದಣ್ಣ ಕೋಟ್ರೆ, ಗ್ರಾ.ಪಂ.
ಅಧ್ಯಕ್ಷ ಭೀಮರಾವ ಕಾಂಬಳೆ, ವಿಜಯಕುಮಾರ ಘೂಳನೂರ, ಧರ್ಮರಾವ್ ಮಾಶಾಳಕರ, ಮಹಾಂತೇಶ ಬನ್ನಿಗಿಡ, ಶಿವಲಾಲ ಗುತ್ತೇದಾರ, ಗುರುನಾಥ ಬೆನೆಕನ್ ಹಾಗೂ ಗ್ರಾಮಸ್ಥರು, ಮಹಿಳೆಯರು ಭಾಗವಹಿಸಿದ್ದರು.