Advertisement

ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

11:53 AM Nov 29, 2018 | Team Udayavani |

ಬೆಂಗಳೂರು: ಬಿಬಿಎಂಪಿಯ ಆರೋಗ್ಯ ಸೇವಾ ಸಂಪರ್ಕ ಕಾರ್ಯಕರ್ತೆಯರಿಗೆ 10 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿ ಎಐಟಿಯುಸಿ ಹಾಗೂ ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. 

Advertisement

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಬುಧವಾರ ಧರಣಿ ನಡೆಸಿದ ನೂರಾರು ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಿ, ವಲಯ ಮಟ್ಟದಲ್ಲಿನ ತಾರತಮ್ಯ ಸರಿಪಡಿಸಬೇಕು. ಜತೆಗೆ ಕಾರ್ಯಕರ್ತೆಯರಿಗೆ ಇಎಸ್‌ಐ ಹಾಗೂ ಪಿಎಫ್ ನೀಡಿ, ಸಹಕಾರ ಸಂಘ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿದ ಮಾತನಾಡಿದ ಎಐಟಿಯುಸಿ ಗೌರವಾಧ್ಯಕ್ಷ ಎನ್‌.ಶಿವಣ್ಣ, ಬಿಬಿಎಂಪಿ ಎಂಟು ವಲಯಗಳಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರಿಗೆ ಒಂದೊಂದು ರೀತಿಯ ವೇತನ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಪಶ್ಚಿಮ ವಲಯದಲ್ಲಿ 6,449 ರೂ. ನೀಡಿದರೆ, ಪೂರ್ವ ಹಾಗೂ ದಕ್ಷಿಣ ವಲಯಗಳಲ್ಲಿ 3,091 ರೂ., ಯಲಹಂಕದಲ್ಲಿ 8,000 ರೂ., ದಾಸರಹಳ್ಳಿಯಲ್ಲಿ 5,000 ರೂ. ಗಳನ್ನು ಮಾಸಿಕ ವೇತನವಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿದರು. 

ವೇತನದಲ್ಲಿನ ತಾರತಮ್ಯ ಸರಿಪಡಿಸಲು ಮೇಯರ್‌ ಅವರು ಕೂಡಲೇ ಕ್ರಮಕೈಗೊಳ್ಳಬೇಕು. ಜತೆಗೆ ಗುತ್ತಿಗೆದಾರರಿಂದ ಕಾರ್ಯಕರ್ತೆಯರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ಉದ್ದೇಶದಿಂದ ಪೌರ ಕಾರ್ಮಿಕರಿಗೆ ನೀಡುವ ಮಾದರಿಯಲ್ಲಿಯೇ, ಆರೋಗ್ಯ ಸಂಪರ್ಕ ಕಾರ್ಯಕರ್ತೆಯರಿಗೂ ಪಾಲಿಕೆಯಿಂದಲೇ ನೇರವಾಗಿ ಬ್ಯಾಂಕ್‌ ಖಾತೆಗೆ ವೇತನ ಜಮೆ ಮಾಡಬೇಕು ಎಂದು ಆಗ್ರಹಿಸಿದರು. 

ಮೇಯರ್‌ ಭರವಸೆ: ಕಳೆದ ಹತ್ತು ವರ್ಷಗಳಿಂದ ಬಾಕಿಯಿರುವ ವೇತನವನ್ನು ಕೂಡಲೇ ಪಾವತಿಸುವಂತೆ ಹಾಗೂ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಪಾವತಿಸುವಂತೆ ಅಧಿಕಾರಿಗಳಿಗಳಿಗೆ ಸೂಚನೆ ನೀಡಲಾಗುವುದು. ಜತೆಗೆ ಸಹಕಾರ ಸಂಘ ರಚನೆಯ ಕುರಿತಂತೆ ಶೀಘ್ರದಲ್ಲಿಯೇ ಆಯುಕ್ತರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಮೇಯರ್‌ ಗಂಗಾಂಬಿಕೆ ಅವರು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next