ಗದಗ: ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರ ಸಂಘ ನೇತೃತ್ವದಲ್ಲಿ ನೂರಾರು ನೌಕರರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಆರಂಭವಾದ ಪ್ರತಿಭಟನೆಗೆ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಚಾಲನೆ ನೀಡಿದರು.
ಬಳಿಕ ಪ್ರಮುಖ ಮಾರ್ಗಗಳ ಮೂಲಕ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಆರೋಗ್ಯ ಇಲಾಖೆಯಲ್ಲಿ ಖಾಯಂ ಸಿಬ್ಬಂದಿಗಿಂತ ಗುತ್ತಿಗೆ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲಾಖೆಯಲ್ಲಿ ಒಳ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಜಿಲ್ಲೆಯ 500 ಸೇರಿದಂತೆ ರಾಜ್ಯಾದ್ಯಂತ 30 ಸಾವಿರಕ್ಕಿಂತ ಹೆಚ್ಚಿನ ಗುತ್ತಿಗೆ ನೌಕರರು ಅತ್ಯಲ್ಪ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಕಡಿಮೆ ಸಂಬಳದಲ್ಲಿ ಸಂಸಾರ ಸಾಗಿಸುವುದೇ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.
ನೌಕರರ ಗುತ್ತಿಗೆ ಅವಧಿಯನ್ನು ವಾರ್ಷಿಕ ಬದಲಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ನವೀಕರಿಸಲಾಗುತ್ತಿದೆ. ವರ್ಷಕ್ಕೊಂದು ದಿನ ಬ್ರೇಕ್ ಇನ್ ಸರ್ವೀಸ್ ಪದ್ಧತಿ ಅನುಸರಿಸಲಾಗುತ್ತಿದೆ. ಇಲಾಖೆಯಡಿ ನೇರ ಗುತ್ತಿಗೆ ನೌಕರರಾಗಿದ್ದವರನ್ನು ಇದ್ದಕ್ಕಿಂತ ಹೊರ ಗುತ್ತಿಗೆ ನೌಕರರನ್ನಾಗಿಸುತ್ತಿದೆ. ಇದರಿಂದಾಗಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಲ್ಲಿ ಸೇವಾ ಅಭದ್ರತೆ ಕಾಡುತ್ತಿದೆ ಎಂದು ದೂರಿದರು.
2016ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಎಲ್ಲ ಗುತ್ತಿಗೆ ನೌಕರರಿಗೆ ಕನಿಷ್ಠ 14 ಸಾವಿರ ರೂ. ವೇತನ ನಿಗದಿಗೊಳಿಸಬೇಕು. ಸೇವಾ ಭದ್ರತೆ ಹಾಗೂ ಕೆಲಸದ ಸ್ಥಳದಲ್ಲಿ ನೌಕರರಿಗೆ ಘನತೆ ಖಾತ್ರಿಪಡಿಸಬೇಕು. ಹರಿಯಾಣ ಮಾದರಿಯಲ್ಲಿ 60 ವರ್ಷದ ಅವಧಿಗೆ ಸೇವಾ ಭದ್ರತೆ, ದೆಹಲಿ ಮಾದರಿಯಲ್ಲಿ ದ್ವಿಗುಣ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆ ಅಧ್ಯಕ್ಷ ಡಾ| ಜಯಕುಮಾರ ಬ್ಯಾಳಿ, ಡಾ| ಎಸ್.ಎ. ಬಿರಾದಾರ, ಮಹಮ್ಮದಗೌಸ್ ಹುನಗುಂದ, ಡಾ| ಮಹೇಶ ಕೊಪ್ಪದ, ರಾಜಣ್ಣ ಕಣವಿ, ಫಕ್ಕಿರೇಶ ಜಂತ್ಲಿ, ಗಿರೀಶ ಶೀರಿ, ರುದ್ರೇಶ ಬಳಿಗಾರ, ಗುರುರಾಜ ಕೆತ್ಯಾಳ, ದಯಾನಂದ ಕೆಂಚರೆಡ್ಡಿ, ಪ್ರವೀಣ ರಾಮಗೇರಿ, ರಘ, ಅಶ್ವತ ರೆಡ್ಡಿ, ರಾಜೇಶ ಜಾಲಿಹಾಳ, ಜ್ಯೋತಿ, ಡಾ| ಗೀತಾ ಧನಗರ, ವಾಸಂತಿ ಮಲ್ಲಾಪುರ, ಉಮೇಶ ಲಮಾಣಿ, ಡಾ| ನಂದಾ ಶಾಸ್ತ್ರಿ, ಮಂಜುನಾಥ ಹಿರೇಮಠ, ಮಂಜು ಕುಂಬಾರ, ಮಲ್ಲಿಕಾರ್ಜುನ ಇದ್ದರು.