ಚಿತ್ರದುರ್ಗ: ಹಾಸ್ಟೆಲ್‌ಗಳಿಗೆ ಅರ್ಜಿ ಹಾಕಿದ ಎಲ್ಲ ಮಕ್ಕಳಿಗೂ ಹಾಸ್ಟೆಲ್ ಸೀಟು ನೀಡುವಂತೆ ಒತ್ತಾಯಿಸಿ ಹಾಗೂ ಅಲೆಮಾರಿ ಮತ್ತು ಅರೆ ಮಾರಿ ಸಮುದಾಯಗಳಿಗೆ ಬಿ.ಸಿ.ಎಂ ಹಾಸ್ಟೆಲ್‌ನಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಿ ಶೇ. 100 ರಷ್ಟು ಹಾಸ್ಟೆಲ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು
ಜಿಲ್ಲಾ ಯಾದವ ಗೊಲ್ಲರ ಸಂಘದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಹಾಸ್ಟಲ್‌ಗಳನ್ನು ತೆರೆಯುವಂತೆ ಆಗ್ರಹಿಸಿದರು.
ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಾದ ಗೊಲ್ಲ, ಹೆಳವ, ಉಪ್ಪಾರ, ಬೆಸ್ತರು, ದೊಂಬಿದಾಸ ಇತ್ಯಾದಿ ಕೋಮಿಗೆ ಸೇರಿದ ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜುಗಳಿಗೆ ದಿನನಿತ್ಯವು ನಗರಕ್ಕೆ ಬಂದು ಸಂಜೆ ಹಿಂದಿರುಗಬೇಕು. ಹಾಗಾಗಿ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ. ಕಾಲೇಜು ಆರಂಭವಾಗಿ ಒಂದು ತಿಂಗಳಾಗಿದೆ. ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯಗಳಿಂದ ವಂಚಿತವಾಗಿದ್ದೇವೆ. ಒಂದು ವಾರದೊಳಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಕಳೆದ ತಿಂಗಳು 31 ರಂದು ಹಾಸ್ಟೆಲ್‌ಗಾಗಿ ಒತ್ತಾಯಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಮುನ್ನೂರು ವಿದ್ಯಾರ್ಥಿಗಳು ಪತ್ರ ಬರೆದಿದ್ದೇವೆ. ಪತ್ರ ಚಳವಳಿ ಮಾಡಲಾಗಿದೆ. ಇಲ್ಲಿಯವರೆಗೂ ಸರ್ಕಾರ ಕ್ರಮ ಕೈಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಸಮಸ್ಯೆಗಳ ಕುರಿತು ಸರ್ಕಾರದ ಜೊತೆ ಮಾತನಾಡುವುದಾಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಜಿಲ್ಲಾ ಯಾದವ ಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಯಾದವ್, ಟಿ.ರಂಗಸ್ವಾಮಿ, ಎಸ್.ಟಿ. ಪಲ್ಗುಣೇಶ್ವರ, ಈಶ್ವರಪ್ಪ, ಗೋವಿಂದಪ್ಪ, ವೀರಭದ್ರಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.